

ಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಕುರಿತ ಹೇಳಿಕೆ ಹಾಗೂ ಮಂಡ್ಯದವರು ಛತ್ರಿಗಳೆಂದು ಅವಮಾನಿಸಿದ್ದಾರೆಂದು ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರಕ್ಕೆ ಸುಭದ್ರವಾದ ಸಂವಿಧಾನ ಹಾಗೂ ಇದನ್ನು ಕೊಟ್ಟ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪ್ರತಿ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿರುವುದನ್ನು ಇತಿಹಾಸದ ಪುಟಗಳು ಹೇಳುತ್ತವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಿಕೆಶಿ, ಒಳ್ಳೆಯ ದಿನಗಳಿಗಾಗಿ ಕಾಯೋಣ, ಒಳ್ಳೆಯ ಸಮಯ ಬರಲಿದೆ. ಸಾಕಷ್ಟು ಬದಲಾವಣೆಯಾಗುತ್ತದೆ. ಸಂವಿಧಾನ ಬದಲಾಗುತ್ತದೆ ಎಂದು ಹೇಳಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಜವಾಬ್ದಾರಿ ಸ್ಥಾನದಲ್ಲಿರುವವರು ಹಾಗೂ ಸಂವಿಧಾನ ರಕ್ಷಿಸಬೇಕಾದವರೂ ಆದ ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ನೀತಿ ಖಂಡನೀಯ. ಮಾತ್ರವಲ್ಲದೆ ಮಂಡ್ಯದ ಸ್ವಾಭಿಮಾನಿ ಜನರನ್ನು ಛತ್ರಿಗಳು ಎಂದು ಅವಮಾನಿಸಿರುವುದನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಡಿ.ಜಯರಾಮು, ಭದ್ರಾಚಲಮೂರ್ತಿ, ಶ್ರೀನಿವಾಸ, ಶಂಕರ್, ಸುಂದರೇಶ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಬಿ.ಆರ್.ಸುರೇಶ್ ಇತರರಿದ್ದರು.