

ತುಮಕೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮೂರು ವಿಧೇಯಕಗಳ ತಿದ್ದುಪಡಿ ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೀದಿಗಿಳಿದು ಹೋರಾಟ ನಡೆಸಿದರು.
ನಗರದ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ದೇವೇಗೇಡರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಜೆಡಿಎಸ್ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಪೂರ್ವ
ದಲ್ಲಿ ಜೆಡಿಎಸ್ ಜಿಲ್ಲಾ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಶಾಸಕ ಬಿ.ಸತ್ಯನಾರಾಯಣ್ ಅವರ ಶ್ರದ್ಧಾಂಜಲಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಚ್.ಡಿ.ದೇವೇಗೌಡ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಸಂಸತ್ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದರು.
ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ, ಆರಂಭದಿಂದಲೂ ರೈತರು, ಕಾರ್ಮಿಕರ ವಿಚಾರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆಯೂ ರೈತರ ಪರವಾಗಿ ನಿಲ್ಲಲ್ಲಿದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ-2020, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ - 2020 ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕುರಿತಂತೆ ನಮ್ಮ ಹೋರಾಟ ನಿರಂತರ ಎಂದರು.
ಜೆಡಿಎಸ್ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಇಂತಹ ಕರಾಳ ಕಾಯ್ದೆಗಳು ಜಾರಿಯಾಗಲು ಅವಕಾಶ ಕೊಡುವುದಿಲ್ಲ, ಮೂರು ಕಾಯ್ದೆಗಳ ತಿದ್ದುಪಡಿಯಿಂದ ಇದರ ಫಲಾನುಭವಿಗಳಾಗಲಿರುವ ರೈತರು, ಕಾರ್ಮಿಕರಿಗೆ ಏನಾದರೂ ಉಪಯೋಗವಿದೆಯೇ ಎಂದು ಬಿಜೆಪಿ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಹಾಲಿ ಇದ್ದ ಭೂ ಸುಧಾರಣಾ ಕಾಯ್ದೆಯಿಂದ ಏನಾದರೂ ಕೈಗಾರಿಕೆ ತೆರೆಯಲು ಅನಾನುಕೂಲವಿತ್ತೇ ಎಂದು ಪ್ರಶ್ನಿಸಿದ ಅವರು, ಭೂ ಸುಧಾರಣೆ ಕಾಯ್ದೆ ಕಲಂ 79(ಬಿ)ಕ್ಕೆ ತಿದ್ದುಪಡಿ ಮತ್ತು 109ನೇ ಕಲಂ ರದ್ಧತಿಯಿಂದ ಕರ್ನಾಟಕ ಸೇರಿದಂತೆ ರಾಷ್ಟ್ರದಲ್ಲಿ ತುಂಡು ಭೂಮಿ ಹೊಂದಿದ್ದ ರೈತರು ಬೀದಿಗೆ ಬೀಳಲಿದ್ದಾರೆ. ಅಲ್ಲದೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ದೊಡ್ಡ ಕಂಪನಿಗಳ ಏಕಸಾಮ್ಯದಿಂದ ಸಣ್ಣ ವರ್ತಕರು ಮತ್ತು ರೈತರು ಮತ್ತಷ್ಟು ಅಧೋಗತಿಗೆ ತಳ್ಳಲ್ಪಡಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಬಿಎಂಎಲ್ ಕಾಂತರಾಜು, ಜಿಪಂ ಅಧ್ಯಕ್ಷೆ ಲತಾ, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಎಂ.ಟಿ.ಕೃಷ್ಣಪ್ಪ, ಎಚ್.ನಿಂಗಪ್ಪ, ಸುಧಾಕರಲಾಲ್, ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜೀನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮತ್ತಿತರರು ಇದ್ದರು.
ಜೆಡಿಎಸ್ ಪಕ್ಷವನ್ನು ರೈತರು, ಕಾರ್ಮಿಕರು, ಬಡವರಿಂದ ಕಟ್ಟಿ ಬೆಳೆಸಿರುವ ಎಚ್.ಡಿ.ದೇವೇಗೌಡರು, ರೈತರು ಸಂಕಷ್ಟದಲ್ಲಿರುವಾಗ ತಮ್ಮ ವಯಸ್ಸನ್ನೂ ಲಕ್ಕಿಸದೆ ಹೋರಾಟಕ್ಕೆ ಇಳಿದಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ. ಡಿ.ಸಿ.ಗೌರಿಶಂಕರ್ ಶಾಸಕ