ರಾಜ್ಯ ಸರ್ಕಾರ ವಿರುದ್ಧ ಜೆಡಿಎಸ್ ಪ್ರತಿಭಟನೆ

6
Published on

ಮೈಸೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್‌ನಿಂದ ನಗರದ ಬುಧವಾರ ಪ್ರತಿಭಟನೆ ನಡೆಯಿತು.
ಗಾಂಧಿ ವೃತ್ತದಲ್ಲಿ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಧರಣಿ ನಡೆಸಿದ ಮುಖಂಡರು, ಕಾರ್ಯಕರ್ತರು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಜನ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಇಳಿಸಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ ಎಂದು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕತ್ತರಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ಜನರಿಗೆ ಬರೆ ಹಾಕಿದೆ. ಹೆಚ್ಚಿನ ಆರ್ಥಿಕ ಹೊರೆ ಹೊರಿಸಿ ಸಾಲಗಾರನ್ನಾಗಿ ಮಾಡುತ್ತಿದೆ ಎಂದು ದೂರಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುವುದು ಸೂಕ್ಷ್ಮ ವಿಚಾರ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇರೆ ರಾಜ್ಯಗಳ ಬೆಲೆಗಳಿಗೆ ಹೋಲಿಕೆ ಮಾಡುತ್ತಿರುವುದು ಖಂಡನೀಯ. ಆಟೋದಲ್ಲಿ ಓಡಾಡುವವರು, ದ್ವಿಚಕ್ರ ವಾಹನಗಳನ್ನು ಬಳಸುವವರು ಬಡವರಾಗಿದ್ದು, 103 ರೂ. ನೀಡಿ ವಾಹನಕ್ಕೆ ಪೆಟ್ರೋಲ್, ಡೀಸೆಲ್ ತುಂಬಿಸುವುದು ಕಷ್ಟವಾಗುತ್ತದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಕ್ಕರ್, ಆಸ್ತಿ ನೋಂದಣಿ ಶುಲ್ಕ ಸೇರಿದಂತೆ ಒಂದರ ಮೇಲೊಂದರಂತೆ ದರ ಏರಿಕೆ ಮಾಡುತ್ತಿದೆ. ಮತ್ತೊಂದೆಡೆ ಈಗ ನೀರಿನ ಬಿಲ್ ಏರಿಕೆ ಮಾಡಲು ಹೊರಟಿದೆ ಎಂದು ದೂರಿದರು.
ಲೋಕಸಭಾ ಚುನಾವಣೆಯಲ್ಲಿ 18 ರಿಂದ 25 ಸೀಟ್‌ಗಳನ್ನು ಕಾಂಗ್ರೆಸ್ ಗೆಲ್ಲುತ್ತೇವೆಂದು ಹೇಳಿಕೊಂಡಿತ್ತು. ಆದರೆ ಕೇವಲ 9 ಸೀಟ್ ಪಡೆದುಕೊಂಡಿದ್ದು, ಅದರಲ್ಲಿಯೂ 25 ಸಾವಿರದಿಂದ 30 ಸಾವಿರ ಲೀಡ್‌ನಿಂದ ಗೆದ್ದಿದ್ದಾರೆ. ಆದರೆ ಮೈತ್ರಿ ಅಭ್ಯರ್ಥಿಗಳು 2 ರಿಂದ 3 ಲಕ್ಷ ಲೀಡ್ ಪಡೆದುಕೊಂಡಿದ್ದಾರೆ. ಸೋಲಿನ ಸೇಡಿಗಾಗಿ ಕಾಂಗ್ರೆಸ್ ಬೆಲೆ ಏರಿಕೆ ಮಾಡುತ್ತಿದೆ. ಕಾಂಗ್ರೆಸ್ ನಿಜವಾಗಿಯೂ ಬಡವರ ಪರವಾಗಿದ್ದರೆ, ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದ ವಿವಿಧ ನಿಗಮ ಮಂಡಳಿಗಳ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದು, ತೆಲಂಗಾಣದ ಚುನಾವಣೆಗೆ ಬಳಸಿಕೊಂಡಿದ್ದಾರೆ. ಈ ಕುರಿತು ಸಿಬಿಐ ತನಿಖೆಯಾಗಬೇಕು. ಮುಂದಿನ ಅಧಿವೇಶನದಲ್ಲಿ ಈ ಎಲ್ಲ ಅಂಶಗಳ ಕುರಿತು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಮೇಯರ್ ಆರ್.ಲಿಂಗಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾಶಂಕರೇಗೌಡ, ಎಸ್‌ಬಿಎಂ ಮಂಜು, ಶಿವಣ್ಣ, ಸವಿತಾ ಸುರೇಶ್, ಭಾಗ್ಯಾ ಮಹದೇಶ್, ಎಂ.ಶಿವಣ್ಣ, ಅಶ್ವಿನಿ ಅನಂತ್, ರಮಣಿ, ಕೆ.ವಿ.ಶ್ರೀಧರ್, ಎಚ್.ಕೆ.ರಮೇಶ್, ಪಕ್ಷದ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಮುಖಂಡರಾದ ಎಚ್.ಕೆ.ರಾಮು, ಫಾಲ್ಕನ್ ಬೋರೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net