

ಶಿವಮೊಗ್ಗ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ಕೀಳುಮಟ್ಟದ ಪದ ಬಳಕೆ ಮಾಡಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ವಿಶೇಷ ತನಿಖಾ ದಳದಿಂದ ಅನರ್ಹಗೊಳಿಸಬೇಕೆಂದಯ ಒತ್ತಾಯಿಸಿ ಗುರುವಾರ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನೆಹರು ರಸ್ತೆಯ ಜೆಡಿಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಲೋಕಾಯುಕ್ತ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದರು. ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರ ವಿರುದ್ಧ ಕೆಟ್ಟ ಪದ ಬಳಸಿ ಪತ್ರ ಬರೆದು ದರ್ಪ ತೋರಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರ ವರ್ತನೆ ಅತ್ಯಂತ ಖಂಡನೀಯವಾದುದು ಎಂದು ಕಿಡಿಕಾರಿದರು.
ಐಪಿಎಸ್ ಅಧಿಕಾರಿ ಎನ್ನುವುದನ್ನು ಮರೆತು ಕುಮಾರಸ್ವಾಮಿ ಅವರ ವಿರುದ್ಧ ಹತಾಶೆ, ಸಿಟ್ಟು, ಆಕ್ರೋಶದಿಂದ ಪದ ಬಳಸಿ ಅವಮಾನಿಸಿರುವುದು ಅಕ್ಷಮ್ಯ ಅಪರಾಧ. ಭೂ ವ್ಯವಹಾರವೊಂದರಲ್ಲಿ 20 ಕೋಟಿ ರೂ.ಗೆ ಬೇಡಿಕೆಯಿಟ್ಟ ಬಗ್ಗೆ ಚಂದ್ರಶೇಖರ್ ವಿರುದ್ಧ ಇನ್ಸ್‌ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ನಿಯ ಹೆಸರಿನಲ್ಲಿ ರಾಜಕಾಲುವೆ ಮೇಲೆ ಬಹುಮಹಡಿ ವಾಣಿಜ್ಯ ಕಟ್ಟಡ ಕಟ್ಟಲಾಗುತ್ತಿದೆ. ಅವರ ವಿರುದ್ಧ ಸರ್ಕಾರಿ ಕೆರೆ ಒತ್ತುವರಿ ಮಾಡಿಕೊಂಡಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರದ ಹಲವು ದೂರುಗಳು ದಾಖಲಾಗಿದ್ದು, ಆರೋಪ ಪಟ್ಟಿ ಕೂಡ ಸಲ್ಲಿಕೆಯಾಗಿವೆ ಎಂದು ದಾಖಲೆಗಳ ಸಹಿತ ಕೇಂದ್ರ ಸಚಿವ ಕುಮಾರಸ್ವಾಮಿ ಮಾಹಿತಿ ಕೊಟ್ಟಿದ್ದಾರೆ. ಚಂದ್ರಶೇಖರ್ ಅವರ ಅಕ್ರಮ ಭ್ರಷ್ಟಾಚಾರಗಳನ್ನು ದಾಖಲೆಗಳ ಸಮೇತ ಮಧ್ಯಮಗಳ ಮುಂದೆ ಬಯಲು ಮಾಡಿದ್ದು ಅಪರಾಧವೇ ಎಂದು ಪ್ರಶ್ನಿಸಿದ ಕಾರ್ಯಕರ್ತರು, ಚಂದ್ರಶೇಖರ್ ಮೇಲಿನ ಆರೋಪಗಳು ನಿರಾಧಾರವಾಗಿದ್ದರೆ ಕಾನೂನಿನ ಅಡಿಯಲ್ಲಿ ಉತ್ತರ ನೀಡಬಹುದಿತ್ತು ಎಂದಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಐಪಿಎಸ್ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಕೆ.ಎನ್.ರಾಮಕೃಷ್ಣ, ಕೆ.ಎಂ.ನಾಗೇಶ್, ದೀಪಕ್ ಸಿಂಗ್, ಡಿ.ಸತೀಶ್, ವೆಂಕಟೇಶ್, ಬಿ.ರಾಘು, ರಾಕೇಶ್ ಡಿಸೋಜಾ, ಗೀತಾ ಸತೀಶ್,ಎಂ.ಗೋಪಿ, ನರಸಿಂಹ ಗಂಧದಮನೆ, ಮಂಜುನಾಥ, ಎಸ್.ಸಿದ್ದೇಶ್, ವಿನಯ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.