

ಮಡಿಕೇರಿ: ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಇದಕ್ಕೂ ಮುಂಚಿತವಾಗಿ ನಗರದ ಎ.ವಿ ಶಾಲೆಯಿಂದ ನಗರದ ಇಂದಿರಗಾಂಧಿ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಿಲಿಂಡರ್ ಅಂತಿಮಯಾತ್ರೆ ಮೂಲಕ ಪ್ರತಿಭಟನಾ ಜಾಥಾ ನಡೆಯಿತು. ಈ ಸಂದರ್ಭ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತರು ಘೋಷಣೆ ಕೂಗಿದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್ ಮಾತನಾಡಿ, ಅಡುಗೆ ಅನಿಲ ಕೇವಲ ನಗರ ಪ್ರದೇಶಗಳಗೆ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲೂ ಜನರು ಅವಲಂಬಿತರಾಗಿದ್ದಾರೆ. ೪೫೦ ರೂ. ಇದ್ದ ಅಡುಗೆ ಅನಿಲ, ಸಬ್ಸಿಡಿ ಕಡಿತಗೊಳಿಸಿ ೨೦೨೦ ಮೇ ತಿಂಗಳಿಗೆ ೫೮೦ ರೂ. ಮಾತ್ರ ಆಗಿತ್ತು. ತದನಂತರ ಪದೇ ಪದೇ ಏರಿಕೆ ಮಾಡಲಾಗಿದೆ. ಇಂದು ೪೫೦ ಇದ್ದ ಅಡುಗೆ ಅನಿಲ ೧೧೪೦ ರೂ. ನೀಡಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ, ಬದುಕು ಕಟ್ಟಿಕೊಳ್ಳಲು ತೊಂದರೆಯಾಗುತ್ತಿದೆ. ಮದ್ಯಮ ವರ್ಗದ ಜನ ಸೇರಿದಂತೆ ಬಡವರು, ಆಟೋ ಚಾಲಕರು, ಕಾರು ಚಾಲಕರು, ಕೂಲಿಕಾರ್ಮಿಕರು ತೊಂದರೆಗೆ ಸಿಲುಕಲಿದ್ದಾರೆ. ಕೇಂದ್ರ ಸರ್ಕಾರದ ಬಡವರ ಮೇಲಿನ ಬೆಲೆ ಏರಿಕೆಯ ದೌರ್ಜನ್ಯಕ್ಕೆ ಧಿಕ್ಕಾರವಿದೆ ಎಂದರು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಗ್ಯಾಸ್ ಬೆಲೆ ಇಳಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಎಂ.ಎ.ಮುಸ್ತಫಾ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಪ್ರಮುಖರಾದ ಎನ್.ಸಿ.ಸುನಿಲ್, ಪಾಣತ್ತಲೆ ವಿಶ್ವನಾಥ್, ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾಶೇಷಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.