ಮಾ.6ರಂದು ಆಡಳಿತ ವೈಫಲ್ಯ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

jds kadidal gopal
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಆಡಳಿತ ವೈಲ್ಯ ಖಂಡಿಸಿ ಜೆಡಿಎಸ್ ಪಕ್ಷದಿಂದ ಮಾ.6ರ ಬೆಳಗ್ಗೆ 11ಕ್ಕೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು. ಜೆಡಿಎಸ್ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ಶಿವಮೊಗ್ಗದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ನೆಹರು ರಸ್ತೆಯ ಪಕ್ಷದ ಕಚೇರಿ ಎದುರಿನಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಹಣವಿಲ್ಲದೆ ಪರದಾಡುತ್ತಿದೆ. ಮೂರು ತಿಂಗಳಿಂದ ಗೃಹಲಕ್ಷ್ಮಿ ಸ್ಥಗಿತವಾಗಿದೆ. ಅನ್ನಭಾಗ್ಯಕ್ಕೆ ನೀಡುವ ಅಕ್ಕಿಯೂ ಇಲ್ಲ. ಗುತ್ತಿಗೆದಾರರಿಗೆ ನೀಡಬೇಕಾದ 32 ಸಾವಿರ ಕೋಟಿ ರೂ. ಇನ್ನೂ ಬಾಕಿ ಉಳಿಸಿಕೊಂಡಿದ್ದು, ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ದೂರಿದರು. ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಪ್ರತಿಪಕ್ಷದವರು ಮಾತ್ರವಲ್ಲದೆ ಆಡಳಿತ ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಿದ್ದಾರೆ. ಬಿಬಿಎಂಪಿ, ಮಹಾನಗರ ಪಾಲಿಕೆಗಳು, ಜಿಪಂ, ತಾಪಂ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತಿಲ್ಲ. ಹಳ್ಳಿ-ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಕಿಡಿಕಾರಿದರು. ಪ್ರಮುಖರಾದ ರಾಕೇಶ್ ಡಿಸೋಜ, ದಾದಾಪೀರ್, ತ್ಯಾಗರಾಜ್, ಮಧುಕುಮಾರ್, ಗೀತಾ ಸತೀಶ್, ಸಂಗಯ್ಯ, ನಿಖಿಲ್, ಗಂಧದ ಮನೆ ನರಸಿಂಹ, ಅಬ್ದುಲ್ ವಾಜಿದ್ ಸುದ್ದಿಗೋಷ್ಠಿಯಲ್ಲಿದ್ದರು.

ಗೋಪಿಶೆಟ್ಟಿಕೊಪ್ಪದಲ್ಲಿ ಕೆ.ಬಿ.ಪ್ರಸನ್ನಕುಮಾರ್ ಶಾಸಕರಾಗಿದ್ದಾಗ 4,700 ಆಶ್ರಯ ಮನೆಗಳು ಹಂಚಲು ಸಿದ್ಧವಾಗಿದ್ದವು. ಈಗ ಆಶ್ರಯ ಮನೆಗಳ ಹಂಚಿಕೆಯಲ್ಲಿ ಭಾರಿ ಗೋಲ್‌ಮಾಲ್ ನಡೆದಿರುವ ಶಂಕೆ ಇದೆ. ಮನೆ ಕೊಡಿಸಲು ಲಾನುಭವಿಗಳಿಂದ 25ರಿಂದ 50 ಸಾವಿರ ರೂ.ವರೆಗೆ ಪಡೆದಿರುವ ಆರೋಪಗಳು ಕೇಳಿಬಂದಿವೆ. ಜಿಲ್ಲಾಧಿಕಾರಿಗಳು ಗಮನಹರಿಸಿ ಗೊಂದಲ ಬಗೆಹರಿಸಬೇಕು. - ದೀಪಕ್ ಸಿಂಗ್, ಜೆಡಿಎಸ್ ನಗರಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net