

ಕೆ.ಆರ್.ಪೇಟೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕುರಿತು ಕೆಲವು ದೃಶ್ಯ ಮಾಧ್ಯಮಗಳ ಮುಂದೆ ಅಸಂಬದ್ಧವಾಗಿ ಮಾತನಾಡಿರುವ ಸಚಿವ ಕೆ.ಸಿ.ನಾರಾಯಣಗೌಡ ಅವರ ವರ್ತನೆ ಸರಿಯಲ್ಲ ಎಂದು ಜೆಡಿಎಸ್‌ನ ತಾಲೂಕು ಮುಖಂಡರು ಕಿಡಿಕಾರಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪಾಕಟಾಕ್ಷದಿಂದ ನಾರಾಯಣಗೌಡರು ಎರಡು ಅವಧಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಭಿವೃದ್ಧಿಗಾಗಿ ಜೆಡಿಎಸ್ ಮುಖಂಡರು ಸಹಕರಿಸದಿದ್ದರೆ ಎರಡನೇ ಅವಧಿಗೆ ಜೆಡಿಎಸ್ ಚಿಹ್ನೆಯ ಮೇಲೆ ಸ್ಪರ್ಧಿಸುವ ಅಗತ್ಯವಾದರೂ ಇವರಿಗೆ ಏನಿತ್ತು ಎಂದು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೇವಣ್ಣ ನಮ್ಮನ್ನು ದನಗಳನ್ನು ಗದರುವಂತೆ ಗದರುತ್ತಿದ್ದರು ಎಂದು ನಾರಾಯಣಗೌಡರು ಈಗ ಹೇಳುತ್ತಿದ್ದಾರೆ. ಇವರಿಗೆ ಆತ್ಮ ಗೌರವವಿದ್ದಿದ್ದರೆ ರೇವಣ್ಣ ಗದರಿದ ತಕ್ಷಣವೇ ಪಕ್ಷ ಬಿಡಬೇಕಾಗಿತ್ತು. ಜೆಡಿಎಸ್‌ನಲ್ಲಿದ್ದಾಗ ಅಭಿವೃದ್ಧಿಗೆ ರೇವಣ್ಣ ಸಹಕರಿಸಲಿಲ್ಲ ಎಂದು ದೂರುತ್ತಿರುವ ಸಚಿವರು, ಬಿಜೆಪಿ ಸೇರಿದ ಬಳಿಕ ಈವರೆಗೂ ಏಕೆ ಕ್ಷೇತ್ರದ ರಸ್ತೆಗಳನ್ನು ನಿರ್ಮಿಸಲು ಆಗಿಲ್ಲ? ಅತಿವೃಷ್ಟಿಯಿಂದ ಹಾನಿಗೀಡಾದ ರಸ್ತೆಗಳು, ಸೇತುವೆಗಳು ಮತ್ತು ಒಡೆದು ಹೋದ ಕೆರೆಗಳ ಮರು ನಿಮಾಣಕ್ಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.
ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು ಮಾತನಾಡಿ, ಡಿ.25 ರಂದು ಪಟ್ಟಣಕ್ಕೆ ಆಗಮಿಸಲಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಥಯಾತ್ರೆಯ ವಿವರವುಳ್ಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಎ.ಎನ್.ಜಾನಕೀರಾಂ, ಡಿಸೆಂಬರ್ 25ರಂದು ಬೆಳಗ್ಗೆ ತಾಲೂಕಿನ ಅಶೋಕನಗರಕ್ಕೆ ರಥ ಆಗಮಿಸಿದ ನಂತರ ಬೂಕನಕೆರೆ, ನಾಟನಹಳ್ಳಿ, ಬಳ್ಳೇಕೆರೆ, ನಾರ್ಗೋನಹಳ್ಳಿ, ಚೌಡೇನಹಳ್ಳಿ, ಹೊಸಹೊಳಲು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಲಿದೆ. ಬಳಿಕ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಯಲಿದೆ. ಚಿಕ್ಕಹೊಸಹಳ್ಳಿ, ಹರಿರಾಯನಹಳ್ಳಿ, ಚಿಲ್ಲದಹಳ್ಳಿ, ಅಗ್ರಹಾರಬಾಚಹಳ್ಳಿ, ವಳಗೆರೆ ಮೆಣಸ, ಶೆಟ್ಟಿನಾಯಕನಕೊಪ್ಪಲು, ಕೈಗೋನಹಳ್ಳಿ, ಸಾರಂಗಿ, ಜಾಗಿನಕೆರೆ, ಕೊಟಗಳ್ಳಿ, ಸಂತೇಬಾಚಹಳ್ಳಿ ಕ್ರಾಸ್ ಮೂಲಕ ರಾತ್ರಿ 9.30ಕ್ಕೆ ಸಂತೇಬಾಚಹಳ್ಳಿ ಗ್ರಾಮ ತಲುಪಲಿದೆ. ಸಂತೇಬಾಚಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮಸ್ಥರೊಂದಿಗೆ ಮುಕ್ತ ಸಂವಾದ ನಡೆಸಿ ವಾಸ್ತವ್ಯ ಹೂಡಲಿದ್ದಾರೆಂದು ತಿಳಿಸಿದರು.
ಪಕ್ಷದ ರಾಜ್ಯ ವಕ್ತಾರ ಜಿ.ಪಿ.ಅಶ್ವಿನ್ ಕುಮಾರ್, ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಮುಖಂಡರಾದ ಬಸ್ ಕೃಷ್ಣೇಗೌಡ, ಬಸ್ ಸಂತೋಷ್ ಕುಮಾರ್, ಬಿ.ಎಂ.ಕಿರಣ್, ಅಕ್ಕಿಹೆಬ್ಬಾಳು ರಘು, ಎಂ.ಬಿ.ಹರೀಶ್, ಮಲ್ಲೇನಹಳ್ಳಿ ಮೋಹನ್, ಬಲ್ಲೇನಹಳ್ಳಿ ರಾಮಚಂದ್ರ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.