

ಆಲ್ದೂರು (ಚಿಕ್ಕಮಗಳೂರು ತಾ.): ಗ್ರಾಪಂ ಸದಸ್ಯರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮ ಸ್ವರಾಜ್ಯವನ್ನಾಗಿ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಹಾಂದಿಯಲ್ಲಿ ಭಾನುವಾರ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ಚುನಾವಣೆಗಳು ಯಾವುದೇ ಪಕ್ಷದ ಚಿಹ್ನೆಗಳ ಮೇಲೆ ನಡೆಯುವುದಿಲ್ಲ. ಆದರೂ ಆಡಳಿತ ಪಕ್ಷದವರು ಬಿಜೆಪಿ ಬೆಂಬಲಿತರೇ ಹೆಚ್ಚು ಆಯ್ಕೆಯಾಗಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕೂಡ ಬಹಳಷ್ಟು ಕಡೆ ಆಯ್ಕೆಯಾಗಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಇದೀಗ ಬಿಜೆಪಿ ಸರ್ಕಾರ ಬಸವಣ್ಣನವರ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೊಡಗು ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ಕುಮಾರಸ್ವಾಮಿ ಅವರು ಮನೆಗಳನ್ನು ನಿರ್ವಿುಸಿದ್ದರು. ಇಂದಿನ ಸರ್ಕಾರ ಉದ್ಘಾಟನೆ ಮಾಡುವ ಮೂಲಕ ನಮ್ಮ ಕೆಲಸ ಎಂದು ಜನರಿಗೆ ಬಿಂಬಿಸುತ್ತಿವೆ ಎಂದು ಟೀಕಿಸಿದರು.
ಬೇಲೂರು ಶಾಸಕ ಲಿಂಗೇಶ್ ಮಾತನಾಡಿ, ನಾನು ರೈತ ಕುಟುಂಬದ ಮಗ. ಜೆಡಿಎಸ್ ವರಿಷ್ಠರು ನನಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ನಾನು ವೀರಶೈವ ಲಿಂಗಾಯಿತ ಜಾತಿಯವನು. ಲಿಂಗೇಶ್ ಹಣ ಪಡೆದು ಬಿಜೆಪಿಗೆ ಹೋಗುತ್ತಾರೆ ಎಂದು ಅಪಪ್ರಚಾರ ಮಾಡಿದರು. ನಾನು ಬಸವ ತತ್ವದಲ್ಲಿ ನಂಬಿಕೆ ಇಟ್ಟವನು. ನಾನು ಪಕ್ಷ ನಿಷ್ಠನಾಗಿದ್ದೇನೆ ಎಂದರು.
ಮಾಜಿ ಶಾಸಕ ವೈಎಸ್ವಿ ದತ್ತ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅವುಗಳ ಹಿಡಿತ ಹೈಕಮಾಂಡ್ ಕೈಯಲ್ಲಿರುತ್ತದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸಾಕ್ಷಿ. ಈ ಹಿಂದೆ ಪೂರ್ಣಚಂದ್ರ ತೇಜಸ್ವಿ ಅವರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಗಳು ಆಡಳಿತಕ್ಕೆ ಬರಬೇಕು ಎಂಬ ಕನಸನ್ನು ಹೊಂದಿದ್ದರು. ಇಂದಿನ ಕಾರ್ಯಕ್ರಮದ ಮೂಲಕ ಆ ಕನಸಿಗೆ ಚಾಲನೆ ದೊರೆಯಲಿ. ಮೂಡಿಗೆರೆ ಕ್ಷೇತ್ರ ಇದಕ್ಕೆ ಮುನ್ನುಡಿ ಬರೆಯಲಿ ಎಂದು ಹೇಳಿದರು.
ವಿವಿಧ ಪಕ್ಷದ ಕಾರ್ಯಕರ್ತರನ್ನು ಜೆಡಿಎಸ್ಗೆ ಬರಮಾಡಿಕೊಳ್ಳಲಾಯಿತು. ಉಪಸಭಾಪತಿ ಎಸ್.ಎಲ್ .ಧಮೇಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್, ರಾಜ್ಯ ಉಪಾಧ್ಯಕ್ಷರಾದ ಎಚ್.ಎಚ್.ದೇವರಾಜ್, ಬಾಲಕೃಷ್ಣೇ ಗೌಡ, ಎಸ್ಸಿ ವಿಭಾಗದ ರಾಜ್ಯಾಧ್ಯಕ್ಷ ಆನಂದ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯದರ್ಶಿ ಶಾಕೀರ್ ಹುಸೇನ್, ತಾಲೂಕು ಅಧ್ಯಕ್ಷ ಜಖಾರೀಯ ಜಾಕೀರ್, ಯುವ ಮೋರ್ಚಾ ಅಧ್ಯಕ್ಷ ವಿನಯ್ರಾಜ್, ಎಸ್ಸಿ-ಎಸ್ಟಿ ವಿಭಾಗದ ಅಧ್ಯಕ್ಷ ಲಕ್ಷ್ಮಣ್, ಮಹಿಳಾ ಅಧ್ಯಕ್ಷೆ ಸುಮಾ ನಾಗೇಶ್, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಲೋಹಿತ್ ಇದ್ದರು.