ದೇವೇಗೌಡರ ಕುಟುಂಬದ ಜೀತ ಮಾಡಲ್ಲ: ಜೆಡಿಎಸ್ ಮಾಜಿ ಅಧ್ಯಕ್ಷ ಜವರೇಗೌಡ ವಾಗ್ದಾಳಿ

03_02_Mdy_01(Jds Political)
Published on

ಮಂಡ್ಯ: ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಾಗಮಂಗಲ ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪಕ್ಷದ ವರಿಷ್ಠರ ನಿರ್ಧಾರಗಳು ಹಾಗೂ ಕಡೆಗಣನೆಯಿಂದ ಬೇಸತ್ತು ಹಲವು ದಿನಗಳಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಹಲವು ಹಿರಿಯ ಮುಖಂಡರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನ್‌ಮುಲ್ ಮಾಜಿ ಅಧ್ಯಕ್ಷ, ಕೆಎಂಎಫ್ ಮಾಜಿ ನಿರ್ದೇಶಕ ಹಾಗೂ ನಾಗಮಂಗಲ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಜವರೇಗೌಡ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮತ್ತವರ ಮಕ್ಕಳು, ಮೊಮ್ಮಕ್ಕಳ ಜೀತ ಮಾಡಲು ನಾವು ಸಿದ್ಧವಿಲ್ಲ. ಆದ್ದರಿಂದ ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಘೋಷಿಸಿದರು.

ತುರ್ತುಪರಿಸ್ಥಿತಿ ನಂತರ 1977ರಲ್ಲಿ ಜೈಲಿನಿಂದ ಬಂದ ದೇವೇಗೌಡರು, ರಾಮಕೃಷ್ಣ ಹೆಗಡೆ ಅವರನ್ನು ಮಂಡ್ಯದಲ್ಲಿ ಸನ್ಮಾನಿಸುವ ಮೂಲಕ ಮಾಜಿ ಸಚಿವ ದಿವಂಗತ ಎಸ್.ಡಿ.ಜಯರಾಂ ನೇತೃತ್ವದಲ್ಲಿ ನಾನು ಜನತಾ ಪಕ್ಷ ಸೇರಿದ್ದೆ. ಆಗಿನಿಂದ ಈವರೆಗೆ ಜನತಾ ಪರಿವಾರದಲ್ಲೇ ಇದ್ದೆ. ದೇವೇಗೌಡರ ಪಕ್ಷಕ್ಕೆ ನಿಷ್ಠೆಯಿದ ಕೆಲಸ ಮಾಡಿದ್ದೇನೆ. ಪಕ್ಷದ ನಿಲುವುಗಳನ್ನು ವಿರೋಧಿಸಿ ಹಲವು ಬಾರಿ ನಾನು ಮುನಿಸಿಕೊಂಡಾಗ ಸ್ವತಃ ದೇವೇಗೌಡರೇ ನನ್ನನ್ನು ಸಂಪರ್ಕಿಸಿ ಮನವೊಲಿಸಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಮತ್ತೆ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲಾಯಿತು. ಈ ಮೂಲಕ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜೆಡಿಎಸ್ ಗೆದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ, ನಾಗಮಂಗಲ ಸೇರಿದಂತೆ ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ. ಬದಲಿಗೆ ಎಲ್ಲವೂ ಹಾಸನದ ಪಾಲಾಯಿತು. ಅವರ ಮನೆಯವರೆಲ್ಲರೂ ಅಧಿಕಾರ ಅನುಭವಿಸಿದರು. ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲೂ ಅವಕಾಶ ಕೊಡಲಿಲ್ಲ. ಜೆಡಿಎಸ್ ನಾಯಕರು ಕಾರ್ಯಕರ್ತರನ್ನು ದುಡಿಸಿಕೊಳ್ಳುತ್ತಾರೆಯೇ ಹೊರತು ಉಳಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿದರು.

ಚಲುವರಾಯಸ್ವಾಮಿ ಅವರಿಗೂ ನನಗೂ ವೈಯಕ್ತಿಕವಾಗಿ ವಿರೋಧವಿತ್ತು. ಒಂದು ಕುಟುಂಬದವರಾದ ಮೇಲೆ ಅಸಮಾಧಾನ, ಭಿನ್ನಾಭಿಪ್ರಾಯ ಇರುತ್ತದೆ. ಆದರೀಗ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಅವರಿಗೆ ಕಾಂಗ್ರೆಸ್‌ನ ನಾಯಕತ್ವ ದೊರೆತಿದೆ. ಆದ್ದರಿಂದ ಅವರ ನಾಯಕತ್ವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ನನ್ನೊಂದಿಗೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ, ನಾಗಮಂಗಲ ತಾಪಂ ಮಾಜಿ ಅಧ್ಯಕ್ಷ ದಾಸೇಗೌಡ ಸೇರಿದಂತೆ ಜಿಪಂ, ತಾಪಂನ ಕೆಲ ಮಾಜಿ ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು.

ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಬಾಲಕೃಷ್ಣ, ಕರಡಹಳ್ಳಿ ಆನಂದ್, ಜಯಣ್ಣ, ಸತ್ಯ ದೇವಲಾಪುರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net