

ಮಂಡ್ಯ: ಮಂಡ್ಯ ಜೆಡಿಎಸ್ ಭದ್ರಕೋಟೆ ಮಾತ್ರವಲ್ಲ ಏಳು ಸುತ್ತಿನ ಕೋಟೆ ಎಂದು ಜಿಲ್ಲಾ ವಕ್ತಾರರೂ ಆದ ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಮಹಾಲಿಂಗೇಗೌಡ ಮುದ್ದನಘಟ್ಟ ತಿರುಗೇಟು ನೀಡಿದರು.
ತಾಲೂಕಿನ ಬೂದನೂರು ಗ್ರಾಮದಲ್ಲಿ ದೊಡ್ಡಮ್ಮ ಎಂಬುವರಿಗೆ ಆರ್ಥಿಕ ನೆರವು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ಜಿಲ್ಲೆ ಈಗ ಜೆಡಿಎಸ್‌ನ ಭದ್ರಕೋಟೆ ಆಗಿಲ್ಲ ಎಂಬ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿಕೆಗೆ ಕಿಡಿಕಾರಿದ ಮಹಾಲಿಂಗೇಗೌಡ, ಎಲ್‌ಆರ್‌ಎಸ್ ಈ ಹಿಂದೆ ಯಾವ ಪಕ್ಷದಿಂದ ಸಂಸದರಾಗಿದ್ದರು ಎನ್ನುವುದನ್ನು ಮರೆತಂತಿದೆ. ಹೇಳಿಕೆ ಕೊಡುವ ಮುನ್ನ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಬೇಕು ಎಂದರು.
ಪಕ್ಷದ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಲು ರಣೋತ್ಸಾಹದಿಂದ ನಿಂತಿದ್ದಾರೆ. ಅಂತೆಯೇ 2023ಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ನ ಮಿಷನ್- 123 ಯಶಸ್ವಿಯಾಗುವುದು ಖಂಡಿತ. ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಳೆದ 2-3 ಚುನಾವಣೆಗಳಲ್ಲಿ ಜೆಡಿಎಸ್ ಸೋಲಿಗೆ ಮ್ಯಾಚ್ ಫಿಕ್ಸಿಂಗ್, ಪಿಂಕ್ ನೋಟ್ ಹಾಗೂ ಸ್ವಪಕ್ಷದ ಒಬ್ಬ ಎಂಎಲ್‌ಸಿ ಅಸಹಕಾರ ಕಾರಣ. ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡ ಗೆಲುವಿಗೆ ಪಿಂಕ್ ನೋಟ್ ಕಾರಣವಾಗಿತ್ತು. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನ ಅಪವಿತ್ರ ಮೈತ್ರಿಯಿಂದಾಗಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಸೋಲಾಗಿ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದರು. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಮು ಸೋಲಿಗೆ ಎಂಎಲ್‌ಸಿ ಕಾರಣವಾದರು ಎಂದು ಮರಿತಿಬ್ಬೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದರು.
ಸ್ವಂತ ನಿವೇಶನಕ್ಕಾಗಿ ಪ್ರತಿಭಟನೆ ನಡೆಸುವ ವೇಳೆ ಹೃದಯಾಘಾತಕೊಳಗಾಗಿದ್ದ ಮಂಡ್ಯ ತಾಲೂಕು ಬೂದನೂರು ಗ್ರಾಮದ ಬಡ ಕುಟುಂಬದ ಮಹಿಳೆ ದೊಡ್ಡಮ್ಮ ಅವರಿಗೆ ಮಹಾಲಿಂಗೇಗೌಡ ಆರ್ಥಿಕ ನೆರವು ನೀಡಿದರು. ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿ ಚಿಕಿತ್ಸೆಗೆಂದು ಸಹಾಯ ಮಾಡಿ ಮಾನವೀಯತೆ ಮೆರೆದರು. ಈ ವೇಳೆ ಗ್ರಾಪಂ ಮಾಜಿ ಸದಸ್ಯ ಸತೀಶ್ ಇತರರಿದ್ದರು.