ಡಿ.22ರಂದು ಮಂಡ್ಯಕ್ಕೆ ಪಂಚರತ್ನ ಯಾತ್ರೆ ಆಗಮನ: ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ

13_12_Mdy_06(Jds Meeting)
Published on

ಮಂಡ್ಯ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಡೆಸುತ್ತಿರುವ ಪಂಚರತ್ನ ಯಾತ್ರೆ ಡಿ.22ರಂದು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದೆ. ಈಗಾಗಲೇ ಎಲ್ಲೆಡೆ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಅದೇ ರೀತಿ ನಮ್ಮಲ್ಲಿಯೂ ಇನ್ನಷ್ಟು ಕಳೆಗಟ್ಟುವಂತೆ ಮಾಡಬೇಕು ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚರತ್ನ ರಥ ಯಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 22ರಂದು ಬೆಳಗ್ಗೆ 9 ಗಂಟೆಗೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ಪಂಚರತ್ನ ಯಾತ್ರೆಯನ್ನು ಅಭೂತಪೂರ್ವವಾಗಿ ಸ್ವಾಗತಿಸಲಾಗುವುದು ಎಂದರು.

ಬಳಿಕ ಬೂದನೂರು, ಶ್ರೀನಿವಾಸಪುರ ಗೇಟ್, ಅರ್ಕೇಶ್ವರ ದೇವಸ್ಥಾನದ ಮುಖಾಂತರ ಗುತ್ತಲು ರಸ್ತೆಯಲ್ಲಿ ಸಂಚರಿಸಿ, ಮೈಷುಗರ್ ಫ್ಯಾಕ್ಟರಿ ವೃತ್ತ, ಮಹಾವೀರ ವೃತ್ತ, ವಿ.ವಿ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ ಮಾರ್ಗವಾಗಿ ಜಿಲ್ಲಾ ಕಾರಾಗೃಹದ ವೃತ್ತ, ಮರೀಗೌಡ ಬಡಾವಣೆ ಮುಖಾಂತರ ಎಪಿಎಂಸಿ ಮಾರುಕಟ್ಟೆ ತಲುಪಲಿದೆ. ಮಧ್ಯಾಹ್ನ 1.30ಕ್ಕೆ ಕಲ್ಲಹಳ್ಳಿ ಮೂಲಕ ಹೊಳಲು ವೃತ್ತ, ಕಾರಿಮನೆ ಗೇಟ್, ಚಿಕ್ಕಮಂಡ್ಯ, ಸಾತನೂರು, ಕೊಮ್ಮೇರಹಳ್ಳಿ, ಹೊನಗಾನಹಳ್ಳಿ, ಹುಲಿವಾನ, ಕೆರಗೋಡು, ಚಿಕ್ಕಬಳ್ಳಿ, ಹಲ್ಲೇಗೆರೆ, ಚಲ್ಲನಾಯಕನಹಳ್ಳಿ, ಚಂದಗಾಲು ಗ್ರಾಮದಲ್ಲಿ ಸಂಚರಿಸಲಿದೆ. ರಾತ್ರಿ 8.30ಕ್ಕೆ ಬಸರಾಳು ಗ್ರಾಮದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ನಂತರ ತಿರುಮಲಪುರ ಗೇಟ್, ದೊಡ್ಡಗರುಡನಹಳ್ಳಿ, ಉಪ್ಪಾರಕನಹಳ್ಳಿ, ಬಿಳಿದೇಗಲು ಗ್ರಾಮದಲ್ಲಿ ಸಂಚರಿಸಿ ಬಿ.ಹೊಸೂರು ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಲಿದ್ದಾರೆ ಎಂದು ವಿವರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಪಂಚರತ್ನ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತದೆ. ಎಚ್‌ಡಿಕೆ ಅವರ 20 ತಿಂಗಳ ರಾಮರಾಜ್ಯವನ್ನ ನಾವು ನೋಡಿದ್ದೇವೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ತೀರ್ಮಾನದಲ್ಲಿರಲಿಲ್ಲ. ರೈತರ ಸಾಲ ಮನ್ನಾಮಾಡಿದ್ದು ಕುಮಾರಸ್ವಾಮಿ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯರಾದ ಕೆ.ಎಸ್.ವಿಜಯಾನಂದ, ಎಚ್.ಎನ್.ಯೋಗೇಶ್, ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಪಿ.ಗೌರೀಶ್, ತಾಲೂಕು ಅಧ್ಯಕ್ಷ ಎಂ.ಜಿ.ತಿಮ್ಮೇಗೌಡ, ಜೆಡಿಎಸ್ ವೀಕ್ಷಕ ಆರ್.ಲಿಂಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ.ಸ್ವಾಮಿಗೌಡ, ಬೂದನೂರು ಸ್ವಾಮಿ, ಸಾತನೂರು ಜಯರಾಮ್, ಮಹಮದ್, ಮಂಜುಳಾ ಉದಯಶಂಕರ್, ಜಯಶೀಲಮ್ಮ, ಕಿರಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net