

ಮಂಡ್ಯ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ನಡೆದಿದ್ದ ಪಂಚರತ್ನ ಯಾತ್ರೆಯಲ್ಲ. ಬದಲಿಗೆ ಜನರ ದಿಕ್ಕು ತಪ್ಪಿಸುವ ವಂಚನೆ ಯಾತ್ರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ಟೀಕಿಸಿದರು.
ಎರಡು ಬಾರಿ ಸಿಎಂ ಆದರೂ ಯಾವುದೇ ಶಾಶ್ವತವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡದೆ ವಂಚಿಸಿದ್ದಾರೆ. ಮೊದಲ ಅವಧಿ ಅಂದರೆ 2004ರಿಂದ 2008ರವರೆಗೆ ಆಡಳಿತ ಜವಾಬ್ದಾರಿಯ ಭಾಗವಾಗಿದ್ದ ಜೆಡಿಎಸ್‌ನವರು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಸತ್ಯ. ಮೆಡಿಕಲ್ ಕಾಲೇಜು, ಲೋಕೋಪಯೋಗಿ, ನೀರಾವರಿ ಇಲಾಖೆ ಕಟ್ಟಡಗು ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇದು ಎಚ್‌ಡಿಕೆ ನಾಯಕತ್ವದಿಂದಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನು 2018ರಲ್ಲಿ ಸಿಎಂ ಆದಾಗಲೂ ಅವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. 14 ತಿಂಗಳ ಆಡಳಿತದಲ್ಲಿ ಮೈಷುಗರ್ ಬಾಗಿಲು ಮುಚ್ಚಿದ್ದು ಸಾಧನೆ ಅಲ್ಲವೇ ಎಂದು ವ್ಯಂಗ್ಯವಾಡಿದ ಅವರು, ಜಿಪಂಯಲ್ಲಿ ಸಭೆಗಳನ್ನೇ ಮಾಡದೇ ಶಾಸಕರು ಅಭಿವೃದ್ಧಿಗೆ ಮಾರಕವಾದರು. ಮನ್‌ಮುಲ್‌ನ ಹಾಲಿಗೆ ನೀರು ಪ್ರಕರಣದಲ್ಲಿ ಎಚ್‌ಡಿಕೆ ಆಪ್ತರೇ ಭಾಗಿಯಾಗಿದ್ದರು. ಆದರೆ ಇನ್ನೂ ಅವರಿಗೆ ಶಿಕ್ಷೆಯಾಗಿಲ್ಲ. ಇದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನಿಸಿದರು.
ಮಾತ್ರವಲ್ಲದೆ ರೈತರಿಗೆ ಮರಣ ಶಾಸನವಾಗಿದ್ದ ಕೃಷಿ ಕಾಯ್ದೆ ಬೆಂಬಲಿಸಿದ್ದಕ್ಕೆ ಎಚ್‌ಡಿಕೆ ಉತ್ತರ ನೀಡಬೇಕು. ಅಲ್ಪಸಂಖ್ಯಾತರಿಗೆ ಮಾರಕವಾಗಿದ್ದ ಸಿಎಎ, ಎನ್‌ಆರ್‌ಸಿ ಕಾಯ್ದೆ ಬೆಂಬಲಿಸಿರುವುದು ಸ್ಪಷ್ಟನೆ ಕೊಡಿ. ಈ ಎಲ್ಲ ವಂಚನೆ ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಂತಹ ಯಾವುದೇ ಭರವಸೆ ಈಡೇರಿಸದೇ ಪಂಚರತ್ನ ಯಾತ್ರೆ ಮೂಲಕ ವಂಚಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಜನರು ಎಂಎಲ್‌ಸಿ ಚುನಾವಣೆ ಮೂಲಕ ಉತ್ತರ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮೋಹನ್, ಜಿಪಂ ಮಾಜಿ ಸದಸ್ಯ ಎಚ್.ಟಿ.ತ್ಯಾಗರಾಜು, ಲಿಂಗರಾಜು, ಗುರುರಾಜ್, ರಾಮಕೃಷ್ಣ, ರೇವಣ್ಣ, ಸಿದ್ದರಾಮೇಗೌಡ ಇದ್ದರು.
ಪೊಲೀಸರ ವಿರುದ್ಧ ಪ್ರತಿಭಟನೆ: ನಗರದಲ್ಲಿ ಬುಧವಾರ ಧರಣಿ ನಿರತ ರೈತರ ಮೇಲಿನ ಪೋಲಿಸರ ದೌರ್ಜನ್ಯ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಬ್ಬು ಹಾಗೂ ಹಾಲಿಗೆ ಬೆಲೆ ನಿಗದಿಗಾಗಿ ಒತ್ತಾಯಿಸಿ ಕಳೆದ 53 ದಿನಗಳಿಂದ ಶಾಂತಿಯುತ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಪೊಲೀಸರು ಏಕಾಏಕಿ ಬಂದು ಬಂಧಿಸಿ ಶಾಮಿಯಾನ ತೆರವುಗೊಳಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಚಾರವೆಸಗಿದಂತಾಗಿದೆ. ಆದ್ದರಿಂದ ದೌರ್ಜನ್ಯ ಎಸಗಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.