ಮಂಡ್ಯದಲ್ಲಿ ಪಂಚರತ್ನ ರಥಕ್ಕೆ ಸ್ವಾಗತ: ಎಚ್‌ಡಿಕೆ, ನಿಖಿಲ್‌ಗೆ ಹಾರಗಳ ಸುರಿಮಳೆ

WhatsApp Image 2022-12-22 at 4.49.53 PM
Published on

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆ ಮೂರನೇ ದಿನವಾದ ಗುರುವಾರವೂ ಅಬ್ಬರಿಸಿತು. ಮಳವಳ್ಳಿ, ಮದ್ದೂರು ಕ್ಷೇತ್ರದ ಬಳಿಕ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿತು. ನಿರೀಕ್ಷೆಯಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು.

ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಎಚ್‌ಡಿಕೆ ಅವರನ್ನು ಅಲ್ಲಿಂದಲ್ಲೇ ಕರೆದುಕೊಂಡು ಬರಲಾಯಿತು. ಪಿಇಟಿ ಅಧ್ಯಕ್ಷರೂ ಆದ ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಎಚ್‌ಡಿಕೆ ಅವರೊಟ್ಟಿಗೆ ಪಂಚರತ್ನ ರಥಯಾತ್ರೆ ತೆರೆದ ವಾಹನದಲ್ಲಿ ಜತೆಯಾದರು. ಮನ್‌ಮುಲ್ ಕಚೇರಿ ಎದುರು ಮೊದಲು ಸ್ವಾಗತ ನೀಡಲಾಯಿತು. ಬಳಿಕ ಶಾಸಕ ಎಂ.ಶ್ರೀನಿವಾಸ್ ಅವರ ಸ್ವಗ್ರಾಮ ಹನಕೆರೆಯಲ್ಲಿಯೂ ಯಾತ್ರೆಯನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಎತ್ತಿನಗಾಡಿ, ಜಾನಪದ ಕಲಾ ತಂಡ, ಕಳಸದೊಂದಿಗೆ ಮೆರವಣಿಗೆ ನಡೆಯಿತು.

ದಾರಿಯುದ್ದಕ್ಕೂ ವಿವಿಧ ಹಾರಗಳನ್ನು ಹಾಕುವ ಮೂಲಕ ಎಚ್‌ಡಿಕೆ ಅವರನ್ನು ಅಭಿನಂದಿಸಲಾಯಿತು. ಮಂಡ್ಯ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಖ್ಯೆ ಜೋರಾಗಿಯೇ ಇತ್ತು. ಫ್ಯಾಕ್ಟರಿ ವೃತ್ತದಿಂದ ಸಮಾವೇಶ ಆಯೋಜಿಸಿದ್ದ ಸಿಲ್ವರ್ ಜ್ಯೂಬಿಲಿ ಉದ್ಯಾನದವರೆಗೂ ಜಾನಪದ ಕಲಾ ತಂಡದೊಂದಿಗೆ ಯಾತ್ರೆಯನ್ನು ಕರೆದುಕೊಂಡು ಬರಲಾಯಿತು. ಮೂರನೇ ದಿನ ಯಾತ್ರೆಯ ಬಹುತೇಕ ಸಮಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೇ ಸಂಚಾರ ಮಾಡಿದ ಹಿನ್ನೆಲೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಇತರರಿದ್ದರು.

ಎಚ್‌ಡಿಕೆಗೆ ದೂರು ಕೊಟ್ಟ ಮಹಿಳೆಯರು: ಗೆಜ್ಜಲಗೆರೆಯ ಮನ್‌ಮುಲ್ ಕಚೇರಿ ಎದುರು ಯಾತ್ರೆ ಆಗಮಿಸಿದ ವೇಳೆ ಎಚ್‌ಡಿಕೆ ಅವರೊಂದಿಗೆ ಮಾತನಾಡಲು ರಸ್ತೆ ಬದಿ ಮಹಿಳೆಯರು ನಿಂತಿದ್ದರು. ಮಾತ್ರವಲ್ಲದೆ ಕೆಳಗೆ ಇಳಿದು ಬರುವಂತೆ ಕೇಳಿಕೊಂಡಾಗ ಸ್ಪಂದಿಸಿದ ಎಚ್‌ಡಿಕೆ ವಾಹನದಿಂದ ಕೆಳಗಿಳಿದು ಬಂದರು. ಬೆಂಗಳೂರು-ಮೈಸೂರು ಹೆದ್ದಾರಿ ಮಾಡಬೇಕಾದರೆ ಹಳ್ಳಿಗಳ ಜನರು ಸಂಚರಿಸುವ ರಸ್ತೆ ಮುಚ್ಚಿದ್ದಾರೆ. ಸ್ಮಶಾನಕ್ಕೆ ಹೋಗಲೂ ರಸ್ತೆ ಇಲ್ಲ. ಇದರಿಂದಾಗಿ ಹೆದ್ದಾರಿ ಆಚೆ ಈಚೆ ದಾಟಲು ಆಗುತ್ತಿಲ್ಲ. ಹಳ್ಳ ಒಡೆದು ರಸ್ತೆ ದಾಟದಂತೆ ಮಾಡಿದ್ದಾರೆ ಎಂದು ದೂರು ಹೇಳಿದರು.

ಹಳ್ಳವನ್ನು ಕಂಡು ಆಕ್ರೋಶವ್ಯಕ್ತಪಡಿಸಿದ ಎಚ್‌ಡಿಕೆ, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಮೊಬೈಲ್ನಲ್ಲಿ ಮಾತನಾಡಿದರು. ಕೂಡಲೇ ಹಳ್ಳ ಮುಚ್ಚಿ ಗ್ರಾಮಸ್ಥರ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಹೆದ್ದಾರಿಯಲ್ಲಿ ಶಾಸಕ ರನ್ನಿಂಗ್: ಯಾತ್ರೆಯ ವೇಳೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸುಮಾರು ಒಂದು ಕಿಮೀ ದೂರ ಓಡಿದರು. ಮಿಮ್ಸ್ ಸಮೀಪ ಯಾತ್ರೆ ಬಂದ ವೇಳೆ ಆಗಮಿಸಿದ ಪುಟ್ಟರಾಜು, ಜನರು ಹೆಚ್ಚಾಗಿದ್ದ ಕಾರಣ ವಾಹನದ ಮೇಲೆ ಹೋಗಲಿಲ್ಲ. ಬದಲಿಗೆ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೂ ಓಡಿದರು. ಈ ವೇಳೆ ಕಾರ್ಯಕರ್ತರು ಅವರೊಂದಿಗೆ ಹೆಜ್ಜೆ ಹಾಕಿದರು. ಮಾತ್ರವಲ್ಲದೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net