

ಮಂಡ್ಯ: ದೇಶ ಸೇವೆ ಮಾಡುವ ಮನೋಭಾವವನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಡುವ ಪ್ರಯತ್ನ ಮಾಡಬೇಕು. ಗಡಿಯಲ್ಲಿ ಸೈನಿಕರು ದೇಶ ರಕ್ಷಣೆ ಮಾಡುತ್ತಿರುವುದರಿಂದಲೇ ನಾವೆಲ್ಲರೂ ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜೆಡಿಎಸ್‌ನಿಂದ ಆಯೋಜಿಸಿರುವ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯಲ್ಲಿ ಅಮಾಯಕರು ಬಲಿಯಾದರು. ಇದಕ್ಕೆ ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿಕೊಂಡಿದ್ದಾರೆ. ಈ ವೇಳೆ ನಮ್ಮ ಸೈನಿಕರು ಹುತಾತ್ಮರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ. ವೀರ ಸೈನಿಕರನ್ನು ಗೌರವಿಸುವ ಮನೋಭಾವ ಎಲ್ಲರಲ್ಲಿಯೂ ಇರಬೇಕು. ಅವರಂತೆಯೇ ದೇಶ ರಕ್ಷಣೆಗೆ ಸೇರ್ಪಡೆಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರಗಳು ಸಹಕಾರಿ ಆಗಿದೆ. ಬೇಸಿಗೆ ರಜೆ ಇರುವುದರಿಂದ ಈ ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು. 320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕರಾಟೆ, ಚಿತ್ರಕಲೆ ಸೇರಿದಂತೆ ವಿವಿಧ ಕಲಾತ್ಮಕ ಹಾಗೂ ಮಕ್ಕಳು ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತಹ ಕಾರ್ಯಕ್ರಮಗಳನ್ನು ಪರಿಚಯಿಸುವ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮುಖಂಡರಾದ ನವೀನ್, ಕಾಳೇಗೌಡ, ಅರವಿಂದ್, ಸುರೇಶ್ ಇತರರಿದ್ದರು.