

ಬೆಂಗಳೂರು: ಜೆಡಿಎಸ್ ಸಂಘಟನೆಗಾಗಿ ಮಾರ್ಚ್ ತಿಂಗಳಿಂದ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ(JDS Organisation; Devegowda's state tour from March) ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಜೆ.ಪಿ.ಭವನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಕ್ಷದ ಸಂಘಟನೆಗೆ ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಮಾರ್ಚ್ ತಿಂಗಳಿಂದ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ. ಕಾರ್ಯಕರ್ತರು, ಮುಖಂಡರ ಜತೆಗೂಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಕೆಲಸ ಮಾಡಬೇಕಿದೆ. ನಾನು, ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ಎಲ್ಲ ಹಿರಿಯ, ಕಿರಿಯ ಮುಖಂಡರು ಸೇರಿ ಕಾರ್ಯಕರ್ತರ ಪಡೆಯೊಂದಿಗೆ ಪಕ್ಷ ಕಟ್ಟುತ್ತೇವೆ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ. ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ. ಬೆಂಗಳೂರು ನಗರದಲ್ಲಿ ಸ್ಥಳೀಯರ ಮುಖಂಡರ ಜತೆಗೂಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಮಾಜಿ ಶಾಸಕ ನಾರಾಯಣ ರಾವ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಬೆಂಗಳೂರು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು, ಮಹಿಳಾ ಜನತಾದಳ ಮುಖಂಡರು, ಕಾರ್ಯಕರ್ತರು ಉಪ್ಥಿತರಿದ್ದರು.