ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡ್ಬೇಕು; Dasara ವೇದಿಕೆಯಲ್ಲೇ ಸಿಎಂ ಪರ ಬ್ಯಾಟ್​ ಬೀಸಿದ ಜೆಡಿಎಸ್​ ಶಾಸಕ GT Devegowda

Siddu GTD
Published on

ಮೈಸೂರು: 2024ನೇ ಸಾಲಿನ ಮೈಸೂರು ದಸರಾಗೆ (Mysore Dasara) ಅದ್ಧೂರಿಯಾಗಿ ಚಾಲನೆ ನೀಡಲಾಗಿದ್ದು, ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಇನ್ನೂ ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯ ಪಾಲಿಗೆ ದೊಡ್ಡ ಉರುಳಾಗಿ ಪರಿಣಮಿಸಿದ್ದು, ದಿನ ಕಳೆದಂತೆ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಇದೆಲ್ಲದರ ನಡುವೆ ಜಿಡಿಎಸ್​ ಶಾಸಕ ಜಿ.ಟಿ. ದೇವೇಗೌಡ (GT Devegowda) ಸಿಎಂ ಪರ ಬ್ಯಾಟ್​ ಬೀಸಿದ್ದು, ಸಿದ್ದರಾಮಯ್ಯ (Siddaramaiah) ಏಕೆ ರಾಜೀನಾಮೆ ಕೊಡ್ಬೇಕು ಎಂದು ದಸರಾ ವೇದಿಕೆಯಲ್ಲೇ ಪ್ರಶ್ನಿಸುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ಧಾರೆ.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ (GT Devegowda), ಈ ಬಾರಿಯ ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪನಾ ಆಯ್ಕೆ ಉತ್ತಮವಾಗಿದೆ. ಅವರು ಯಾವುದೇ ವಿವಾದ ಇಲ್ಲದ ಸಾಹಿತಿಗಳು. ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು ಆರೋಗ್ಯ ಕರುಣಿಸಲಿ.

ಸಿಎಂ ಸಿದ್ದರಾಮಯ್ಯನವರು (Siddaramaiah) ಚಾಮುಂಡೇಶ್ವರಿ (Chamundeshwari) ತಾಯಿಯ ವರಪುತ್ರ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದಲೂ ಸಿದ್ದರಾಮಯ್ಯ ಸಚಿವರಾಗಿ, ಡಿಸಿಎಂ ಆಗಿ, ಎರಡು ಭಾರಿ ಸಿಎಂ ಆಗಿದ್ದಾರೆ ಎಂದರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಕಾರಣ. ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪಚುನಾವಣೆ ವೇಳೆ ಸಿದ್ದರಾಮಯ್ಯರನ್ನ ಸೋಲಿಸಲಿಕ್ಕೆ ನಾವು ತೀರ್ಮಾನ ಮಾಡಿದ್ವಿ. ಆದರೆ ಸಿಎಂ ಆ ಚುನಾವಣೆಯಲ್ಲಿ ಗೆದ್ದರು. ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನ ರಾಜ್ಯ ಮಟ್ಟಕ್ಕೆ ಕೊಂಡೋಯ್ದದ್ದು ಸಿದ್ದರಾಮಯ್ಯನವರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಸಿದ್ದರಾಮಯ್ಯ ಯಾವತ್ತೂ ಕುಟುಂಬ ನೋಡಿದವರಲ್ಲ. ಈಗ ಎಲ್ಲಾ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಎಫ್‌ಐ‌ಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್ ನಲ್ಲಿ ಇರೋರು ರಾಜೀನಾಮೆ ಕೊಡ್ತಾರಾ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದ್ಯಾ. ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ ಕುಮಾರಸ್ವಾಮಿ ಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ-ಜೆಡಿಎಸ್​ ಮೈತ್ರಿ ಪಕ್ಷಗಳ ವಿರುದ್ಧವೂ ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net