ತ.ನಾಡು ಸಿಎಂ ಸ್ಟಾಲಿನ್ ಮೆಚ್ಚಿಸಲು ನೀರು ಕೊಡುತ್ತಿರುವ ರಾಜ್ಯಸರ್ಕಾರ: ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ

madnay news (5)
Published on

ಮಂಡ್ಯ: ಬರಿದಾಗಿರುವ ಕಾವೇರಿ ಒಡಲಿನ ಸಂಕಷ್ಟ ಪರಿಸ್ಥಿತಿಯನ್ನು ಅರ್ಥೈಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕೂಡಲೇ ನೀರು ನಿಲ್ಲಿಸಬೇಕು. ಅಣೆಕಟ್ಟೆ ಖಾಲಿಯಾದರೆ ರಾಜ್ಯದ ರೈತರು ಉಳಿಯುವುದಿಲ್ಲ. ಅನ್ನದಾತ ಶಾಪದಿಂದ ಅಧಿಕಾರಸ್ಥರಿಗೆ ಉಳಿಗಾಲವಿರುವುದಿಲ್ಲ ಎಂದು ಜೆಡಿಎಸ್‌ನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಸಿದರು.

ನಗರದಲ್ಲಿ ಜೆಡಿಎಸ್ ಆಯೋಜಿಸಿದ್ದ ಕಾವೇರಿ ಹೋರಾಟದಲ್ಲಿ ಮಾತನಾಡಿದ ಅವರು, ರಾಜ್ಯದ ಹಿತವನ್ನು ಬಲಿಕೊಟ್ಟು ಮುಂದಿನ ಲೋಕಸಭಾ ಚುನಾವಣೆ ಮೈತ್ರಿಗಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಮೆಚ್ಚಿಸಲು ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ತಾಕತ್ತು ಪ್ರದರ್ಶಿಸಿ ನೀರು ನಿಲ್ಲಿಸಿದರೆ, ಅವರೊಂದಿಗೆ ನಾವು ನಿಲ್ಲುತ್ತೇವೆ ಎಂದರು.

ರಾಜ್ಯದ ರೈತರ ಹಿತಕ್ಕಾಗಿ ಪ್ರತಿಭಟನೆ ನಡೆಸುವಂತೆ ಅನಾರೋಗ್ಯದ ನಡುವೆಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ವರುಣನ ಕೃಪೆ ಬೇಡಿ ಮಾಜಿ ಪ್ರಧಾನಿ ದೇವೇಗೌಡರು ಹೊಳೆನರಸೀಪುರದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕ, ಮಾಜಿ ಶಾಸಕರು ಮತ್ತು ಇತರೆ ಜನಪ್ರತಿನಿಧಿಗಳು ನಡೆಸುತ್ತಿರುವ ಹೋರಾಟಕ್ಕೆ ಬಲ ತುಂಬಲು ನಾನೂ ಭಾಗಿಯಾಗಿದ್ದೇನೆಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾವೇರಿ ವಿಚಾರದಲ್ಲಿ ಸಾಕಷ್ಟು ಅನುಭವವಿದ್ದರೂ ಕಾವೇರಿ ಪ್ರಾಧಿಕಾರದ ಮುಂದೆ ನಮ್ಮ ಸಂಕಷ್ಟ, ವರುಣನ ಅವಕೃಪೆ, ಜಲಾಶಯದ ಸ್ಥಿತಿಗತಿ ಕುರಿತು ಮನವಿ ಸಲ್ಲಿಸದೇ ಸುಪ್ರಿಂ ಕೋರ್ಟಿಗೆ ಅರ್ಜಿ ಹಾಕಿರುವುದು ಸರಿಯಾದ ಕ್ರಮವಲ್ಲ. 5 ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನಸಾಮಾನ್ಯರನ್ನು ಶಿವ ಶಿವ ಎನ್ನುವ ಪರಿಸ್ಥಿತಿಗೆ ತಂದೊಡ್ಡಿರುವ ರಾಜ್ಯ ಸರ್ಕಾರ ಹಾಗೂ ಕಾವೇರಿ ಸಂಕಷ್ಟದ ಬಗ್ಗೆ ಮೌನ ಮುರಿಯದ ರಾಜ್ಯದ ಸಂಸದರು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net