

ಮದ್ದೂರು: ಮಳೆಯಿಲ್ಲ..ಬೆಳೆಯಿಲ್ಲ..ರೈತರ ಬದುಕು ಸಾಕಾಗಿದೆ… ರಾಗಿ ಮತ್ತು ಉರುಳಿ ಬೆಳೆ ನೀರಿಲ್ಲದೆ ಒಣಗಿ ಹೋಗಿದೆ… ಅಳಿದುಳಿದ ಬೆಳೆ ಉಳಿಸಿಕೊಳ್ಳೋಣವೆಂದರೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ.. ರಾತ್ರಿ ವೇಳೆ ಜಮೀನುಗಳ ಬಳಿ ಹೋಗಲು ಕಾಡು ಪ್ರಾಣಿಗಳ ಭಯ…!
ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಶುಕ್ರವಾರ ಬರ ಪರಿಸ್ಥಿತಿ ಅಧ್ಯಯನ ಮಾಡುವ ಸಂದರ್ಭದಲ್ಲಿ ರೈತರಿಂದ ಕೇಳಿಬಂದ ಸಮಸ್ಯೆಗಳ ಸರಮಾಲೆಗಳಿವು.
ತಾಲೂಕಿನ ಹೂತಗೆರೆ ಗ್ರಾಮದ ಬಕಪ್ಪ ಎಂಬುವವರ ಜಮೀನಿನಲ್ಲಿ ರಾಗಿ ತೆನೆ ವೀಕ್ಷಿಸಿದ ಜೆಡಿಎಸ್ ನಾಯಕರ ತಂಡ, ನಂತರ ಅಂಕನಾಥಪುರ, ಹರಕನಹಳ್ಳಿ, ಮಲ್ಲನಕುಪ್ಪೆ, ಕೆ.ಹೊನ್ನಲಗೆರೆ, ಎಸ್.ಐ. ಹಾಗಲಹಳ್ಳಿ ಇತರ ಬರಪೀಡಿತ ಪ್ರದೇಶಗಳಿಗೆ ತೆರಳಿ ಬೆಳೆಗಳ ಪರಿಸ್ಥಿತಿ ವೀಕ್ಷಿಸಿ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಮಾಹಿತಿ ಪಡೆಯಿತು.
ಮಲ್ಲನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ರೈತರಾದ ನಿಂಗಯ್ಯ ಮತ್ತು ಸುರೇಶ್ ಮಾತನಾಡಿ, ಮಳೆ ನಂಬಿಕೊಂಡು ಮೊದಲು ರಾಗಿ ಹಾಕಿದ್ದೆವು. ಆದರೆ ಮಳೆ ಇಲ್ಲದೆ ಬೆಳೆ ಬರಲಿಲ್ಲ. ನಂತರ ಉರುಳಿ ಬೆಳೆದೆವು. ಅದು ಕೂಡ ಬರಲಿಲ್ಲ. ಇದರಿಂದ ಸಾವಿರಾರು ರೂ. ನಷ್ಟವಾಗಿದೆ. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಹಲವರು ದಾಳಿಗೆ ತುತ್ತಾಗಿದ್ದಾರೆ. ಆದ್ದರಿಂದ ಬೆಳಗಿನ ವೇಳೆ ವ್ಯವಸಾಯಕ್ಕೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಸಮರ್ಪಕವಾಗಿ ಬೆಳೆ ಸಮೀಕ್ಷೆ ಮಾಡಿಲ್ಲ. ಇದರಿಂದ ಸೂಕ್ತ ಪರಿಹಾರ ಸಿಗುವ ನಿರೀಕ್ಷೆ ಇಲ್ಲ ಎಂದು ಅಳಲು ತೋಡಿಕೊಂಡರು.
ಕೆಸ್ತೂರು ಗ್ರಾಮದಲ್ಲಿ ರೈತ ಮಾಸ್ತಿಗೌಡ ಮಾತನಾಡಿ, ಡಿ.ಸಿ.ತಮ್ಮಣ್ಣ ಅವರು ಈ ಹಿಂದೆ ಶಾಸಕರಾಗಿದ್ದಾಗ ಆತಗೂರು ಹೋಬಳಿಯ ಎಲ್ಲ್ಲ ಕೆರೆಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸಿದ್ದರು. ಇದರಿಂದ ರೈತರಿಗೆ ಅನುಕೂಲವಾಗಿತ್ತು. ಈಗ ಶಿಂಷಾ ನದಿ ಮೂಲಕ ತಮಿಳುನಾಡಿಗೆ ನೀರು ಹರಿಯುತ್ತಿದ್ದರೂ ಏತ ನೀರಾವರಿ ಮೂಲಕ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಆಸಕ್ತಿಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೋರುತ್ತಿಲ್ಲ. ಈ ಭಾಗದಲ್ಲಿ ರಾಗಿ ಮತ್ತು ಉರುಳಿ ಬೆಳೆಗಳು ಒಣಗಿ ಹೋಗಿದ್ದು, ಭವಿಷ್ಯದಲ್ಲಿ ಜಾನುವಾರುಗಳ ಮೇವಿಗೆ ಆಭಾವ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಸಚಿರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಶಾಸಕ ಮಂಜು, ಮಾಜಿ ಶಾಸಕರಾದ ಸುರೇಶ್ ಗೌಡ, ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬಿಳಿಯಪ್ಪ, ಚಾಮನಹಳ್ಳಿ ಸಿ.ಕೆ.ಸ್ವಾಮಿಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಮಾದನಾಯಕನಹಳ್ಳಿ ರಾಜಣ್ಣ ಇದ್ದರು.
ಸರ್ಕಾರಕ್ಕೆ ವರದಿ ಸಲ್ಲಿಕೆ
ಜಿಲ್ಲೆಯ 7 ತಾಲೂಕುಗಳಲ್ಲಿ ಬರ ಅಧ್ಯಯನ ಮಾಡಿ ಇಲ್ಲಿನ ವಸ್ತುಸ್ಥಿತಿ ಹಾಗೂ ರೈತರ ಸಂಕಷ್ಟ ತಿಳಿದುಕೊಂಡು ವರದಿ ನೀಡುವಂತೆ ಜೆಡಿಎಸ್ ವರಿಷ್ಠರು ಸೂಚಿಸಿದ್ದಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.ವರದಿ ಸಂಗ್ರಹಿಸಿದ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವಂತೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಜೆಡಿಎಸ್ ಪಕ್ಷ ನಿರಂತರವಾಗಿ ಹೋರಾಟ ಮಾಡಲಿದೆ ಎಂದರು.
ಬಿಟ್ಟಿ ಯೋಜನೆಗಳಿಗೆ ಮನಸೋತು ಕಾಂಗ್ರೆಸ್ ಪಕ್ಷವನ್ನ್ನು ಅಧಿಕಾರಕ್ಕೆ ತಂದ ರಾಜ್ಯದ ಜನರು 3 ತಿಂಗಳಲ್ಲೇ ರೋಸಿ ಹೋಗಿದ್ದಾರೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದರೆ ಪಂಚರತ್ನ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತಂದು ಎಲ್ಲರಿಗೂ ಅನುಕೂಲ ಮಾಡಿಕೊಡುತ್ತಿದ್ದರು ಎಂದರು.
ಗ್ಯಾರಂಟಿಗಳ ಸುಳಿಯಲ್ಲಿ ಸಿದ್ದರಾಮಯ್ಯ
ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದ್ದ ಕಾಮಗಾರಿಗಳಿಗೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಆಗಿದೆ. ಆದರೂ ಇದುವರೆಗೂ ಟೇಕಾಫ್ ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಒಳ್ಳೆಯ ಆಡಳಿತಗಾರ ಎಂದು ಹೆಸರುವಾಸಿಯಾಗಿದ್ದ ಸಿದ್ದರಾಮಯ್ಯ ಅವರು ಗೊತ್ತಿದ್ದು ಗೊತ್ತಿದ್ದು ಇಂತಹ ಕೂಪಕ್ಕೆ ಬಿದ್ದಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಶೇ.20 ರಷ್ಟು ಜನರನ್ನೂ ತಲುಪಿಲ್ಲ. ಗೃಹಲಕ್ಷ್ಮಿಗೆ ಅರ್ಜಿ ಹಾಕಿದ ಎಲ್ಲ ಮಹಿಳೆಯರಿಗೂ 2000 ರೂ. ದೊರೆತಿಲ್ಲ. ಯುವನಿಧಿಯನ್ನು ಇನ್ನು ಆರಂಭಿಸಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಏನೂ ನಡೆಯುತ್ತಿಲ್ಲ ಮತ್ತು ಸರಿಯಿಲ್ಲ ಎಂದು ಹೇಳಿದರು. ಆಪರೇಷನ್ ಹಸ್ತ ಮಾಡಲು ಮುಂದಾಗಿರುವ ಕಾಂಗ್ರೆಸ್ ನಾಯಕರು ಜೆಡಿಎಸ್ ಶಾಸಕರನ್ನು ಸಂಪರ್ಕ ಮಾಡಿರಬಹುದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದರು.