ವರಿಷ್ಠರ ಮೈತ್ರಿ ನಿಲುವಿಗೆ ಬದ್ಧ: ಜೆಡಿಎಸ್ ಸಭೆಯಲ್ಲಿ ತೀರ್ಮಾನ

Jds Leaders Meeting
Published on

ಮಂಡ್ಯ: ಕಳೆದ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಜೆಡಿಎಸ್ ನಾಯಕರು, ಇದೀಗ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಈ ಸಂಬಂಧ ಶನಿವಾರ ನಗರದ ಪಕ್ಷದ ಕಚೇರಿಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಮಹತ್ವದ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ ನಡೆಯಿತು.

ಸಿ.ಎಸ್.ಪುಟ್ಟರಾಜು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಥಾನ ಹೊಂದಾಣಿಕೆ ಮೂಲಕ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿದ್ದೇವೆ.  ಎರಡು ಪಕ್ಷಗಳ ರಾಷ್ಟ್ರೀಯ ನಾಯಕರ ಚಿಂತನೆಗೆ ಬದ್ಧರಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಹಾಗೂ ಜಿ.ಟಿ.ದೇವೇಗೌಡ ನೇತೃತ್ವದ ಪಕ್ಷದ ಕೋರ್ ಕಮಿಟಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗುವುದಾಗಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕಾವೇರಿ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ರೈತರನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ. ತಾಲೂಕು ಮಟ್ಟದಲ್ಲಿ ಸಂಘಟನೆ ಮಾಡಿ ಕೃಷಿ ಹಾಗೂ ಕುಡಿಯುವ ನೀರು ಪಡೆಯಲು ಹೋರಾಟ ನಡೆಸಲಾಗುವುದು. ಇನ್ನು ಚುನಾವಣಾ ಮೈತ್ರಿ ವಿಚಾರವಾಗಿ ಆಸಕ್ತಿ ತೋರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾವೇರಿ ನೀರಿನ ವಿಚಾರದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹೇಳಿಕೆ ಸರಿಯಲ್ಲ. ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಹಿತ ಕಾಯುವುದು ದೇವೇಗೌಡರ ಆದ್ಯತೆಯ ಕೆಲಸ. ಈ ವಿಚಾರದಲ್ಲಿ ಗೌಡರ ಮುಂದೆ ನಾನು ಮತ್ತು ಕೃಷಿ ಸಚಿವರು ಗೌಣ ಎಂಬುವುದನ್ನು ಅವರು ಮನಗಾಣಲಿ ಎಂದು ತಿರುಗೇಟು ನೀಡಿದರು.

ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕೆಲ ಮುಖಂಡರು ಪಕ್ಷವನ್ನು ತೊರೆದು ಹಾಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದು, ಅವರ ಸ್ಥಾನವನ್ನು ತೆರವುಗೊಳಿಸಿ ಬೇರೆ ಪದಾಧಿಕಾರಿಗಳನ್ನು ನೇಮಿಸಲಾಗುವುದು. ಅಲ್ಲದೆ, ಶಾಸಕರು ಮತ್ತು ಮಾಜಿ ಶಾಸಕರ ಜತೆ ಚರ್ಚಿಸಿ ಅವಶ್ಯವಿರುವ ಕಡೆ ಪುನರ್ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net