

ಗುಬ್ಬಿ: ನಿರೀಕ್ಷೆಯಂತೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಜೆಡಿಎಸ್ ಕೊಕ್ ನೀಡುವುದು ಖಾತ್ರಿಯಾಗಿದ್ದು, ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಬೃಹತ್ ಸಮಾವೇಶದಲ್ಲಿ ಶ್ರೀನಿವಾಸ್ ಹಾಗೂ ಎಂಎಲ್‌ಸಿ ಬಿಎಂಎಲ್ ಕಾಂತರಾಜು ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.
ನಮ್ಮ ಪಕ್ಷದಲ್ಲೇ ಇದ್ದು ನಂಬಿಸಿ ಕುತ್ತಿಗೆ ಕೊಯ್ಯುವ ಕೆಲಸ ಮಾಡುವುದು ಬೇಡ, ಬೇರೆ ಪಕ್ಷದಲ್ಲಿ ಬೆಳೆಯಲು ಅವಕಾಶಗಳಿದ್ದರೆ ಅಲ್ಲಿಗೆ ಹೋಗಿ, ನಾನೂ ಶುಭಹಾರೈಸುತ್ತೇನೆ ಎಂದು ಸಾವಿರಾರು ಕಾರ್ಯಕರ್ತರ ಮುಂದೆ ಶ್ರೀನಿವಾಸ್ ಕಾಲು ಹೊರಗಿಟ್ಟಿರುವ ಸಂದೇಶ ರವಾನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಮುಗಿಸಲು ಯಾರ ಮನೆಗಳಲ್ಲಿ ರಾತ್ರಿ ಸಭೆಗಳು ನಡೆದಿವೆ ಹಾಗೂ ತುರುವೇಕೆರೆಯಲ್ಲಿ ಎಂ.ಟಿ.ಕೃಷ್ಣಪ್ಪ ಅವರನ್ನು ಸೋಲಿಸಲು ನಡೆಸಿದ ಕುತಂತ್ರಗಳೆಲ್ಲವೂ ತಿಳಿದಿದೆ, ಕಳೆದ ಎರಡು ವರ್ಷದಿಂದ ನನ್ನ ನಾಯಕತ್ವದ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಗಮನಿಸಿದ್ದೇನೆ ಎಂದು ವಾಸು ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಿಷನ್ 123 ಕಾರ್ಯಾಗಾರಕ್ಕೆ ಎರಡನೇ ದಿನ ಬಂದು ನನ್ನನ್ನು ಮಾತು ಆಡಿಸದ ಶ್ರೀನಿವಾಸ್‌ಗೆ ನಾನೇ ಖುದ್ದು ವಿಚಾರಿಸಿದ್ದೆ. ಕುಳಿತು ಮಾತನಾಡಲು ಹೇಳಿದ್ದೆ, ಸಚಿವರಾಗಿದ್ದರೂ ರೈತ ಪರ ಕೆಲಸ ಮಾಡಲಿಲ್ಲ. ತೆಂಗು ಪರಿಹಾರಕ್ಕಾಗಿ ಕಾಳಜಿ ವಹಿಸಲಿಲ್ಲ, ಜನಪರ ಕಾರ್ಯಕ್ರಮ, ನೀರಾವರಿ ಯೋಜನೆಗೂ ಮುಂದಾಗಲಿಲ್ಲ. ಈಗ ಜೆಡಿಎಸ್ ತೆಗಳುವ ಮುನ್ನ ಪಕ್ಷ ನೀಡಿರುವ ಅಧಿಕಾರ ಸ್ಮರಿಸಿಕೊಳ್ಳಬೇಕು ಎಂದು ಬೇಸರಿಸಿದರು.
ನೆಲಮಂಗಲದಿಂದ ಕರೆತಂದು ಎಂಎಲ್ಸಿ ಮಾಡಿದ ನನ್ನ ತಪ್ಪಿಗೆ ಕಾಂತರಾಜುಗೆ ತುರುವೇಕೆರೆಯಲ್ಲಿ ಟಿಕೆಟ್ ಬೇಕಂತೆ, ಈ ಹಿಂದೆ ಗುಬ್ಬಿ ಶಾಸಕರ ಜತೆ ಸೇರಿ ಕಾಂತರಾಜು ತಮ್ಮ ಸಂಬಂಧಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಎಂ.ಟಿ.ಕೃಷ್ಣಪ್ಪ ಸೋಲಿಗೆ ಕಾರಣರಾದರು. ಸಚಿವ ಸ್ಥಾನದ ಆಸೆಗೆ ಸಿ.ಎಸ್.ಪುರ ಹೋಬಳಿಯಲ್ಲಿಯೂ ರಾಜಕೀಯ ಮಾಡಿದ್ದು ನನಗೆ ತಿಳಿದಿದೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡ ಬಿ.ಎಸ್.ನಾಗರಾಜು, ಜಿಪಂ ಮಾಜಿ ಸದಸ್ಯರಾದ ರಾಮಾಂಜಿನಪ್ಪ, ಸಿದ್ದಗಂಗಮ್ಮ, ಗಾಯತ್ರಿದೇವಿ, ಯಶೋದಾ ಮತ್ತಿತರರು ಸಮಾವೇಶದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಕರೆತಂದವರೇ ದೊಡ್ಡವರನ್ನು ಸೋಲಿಸಿದ್ದು ಗೊತ್ತಿಲ್ವೇ ?: ಲೋಕಸಭಾ ಚುನಾವಣೆ ಸೋಲಿನ ನಂತರ ದೊಡ್ಡಗೌಡರು ಆರೋಗ್ಯ ಕೆಡಿಸಿಕೊಂಡಿದ್ದಾರೆ. ಆದರೆ, ಪಕ್ಷ ಸಂಘಟನೆಗೆ ರಾಜ್ಯ ಸುತ್ತುವುದನ್ನು ನಿಲ್ಲಿಸಿಲ್ಲ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರಿಗೆ ಇಷ್ಟವಿರಲಿಲ್ಲ, ಕರೆತಂದವರೇ ರಾತ್ರೋರಾತ್ರಿ ಯಾರಯಾರ ಮನೆಯಲ್ಲಿ ಸಭೆಗಳನ್ನು ನಡೆಸಿ, ಸೋಲಿಸಿದ್ದಾರೆ ಎಂಬುದು ನಮಗೆ ಗೊತ್ತಿಲ್ವೇ? ಎಂದು ಎಚ್‌ಡಿಕೆ ಕಾಂಗ್ರೆಸ್ ಮುಖಂಡರ ವಿರುದ್ಧವೇ ಆರೋಪಿಸಿದರು. ಜೆಡಿಎಸ್ ಅಪ್ಪ, ಮಕ್ಕಳ ಪಕ್ಷ ಎಂದು ಆರೋಪಿಸುವ ಕಾಂಗ್ರೆಸ್ ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರನ್ನು ಕಣಕ್ಕಿಳಿಸಲಿದೆ, ಚಿಕ್ಕನಾಯಕನಹಳ್ಳಿ, ಶಿರಾದಲ್ಲಿ ನಡೆದಿದ್ದೇನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ಕೆಲವು ಶಾಸಕರಿಗೆ ಡಿಕೆಶಿ ಮೈಂಡ್‌ವಾಶ್!: ನಮ್ಮ ಸಮುದಾಯದ ಮಹಾನ್ ನಾಯಕರೊಬ್ಬರಿಗೆ ಸಿಎಂ ಆಗುವ ಕನಸು ಬಂದಿದೆ. ಹಾಗಾಗಿ, ನಮ್ಮ ಕೆಲವು ಶಾಸಕರ ಮೈಂಡ್‌ವಾಶ್ ಮಾಡಿ ನಮ್ಮ ವಿರುದ್ಧವೇ ಮಾತನಾಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪ್ರತಿನಿತ್ಯ ಕುಮಾರಸ್ವಾಮಿದು ಮುಗೀತು, ವರ್ಚಸ್ಸು ಇಲ್ಲ ಎಂದು ಹಬ್ಬಿಸುತ್ತಿದ್ದಾರೆ. ಕರೊನಾ ಕಾರಣದಲ್ಲಿ ರಾಜ್ಯದೆಲ್ಲೆಡೆ ಸಾವುಗಳಾಗಿದ್ದರಿಂದ ಪಕ್ಷ ಸಂಘಟನೆಗೆ ಒತ್ತು ನೀಡಲು ಮನಸ್ಸಾಗಿರಲಿಲ್ಲ, ನಮ್ಮ ಸ್ವಾರ್ಥಕೊಸ್ಕರ ಜನರ ಜೀವ ಬಲಿಕೊಡಬಾರದು ಎಂದು ಬಹಿರಂಗ ಸಮಾವೇಶ ನಡೆಸಿರಲಿಲ್ಲ. ಆದರೆ, ಈಗ ರಾಜ್ಯದೆಲ್ಲೆಡೆ ಪ್ರವಾಸ ಆರಂಭಿಸಿದ್ದು 123 ಸೀಟು ಗೆಲ್ಲುವ ಸಂಕಲ್ಪ ಮಾಡಿದ್ದೇವೆ, ಕಾರ್ಯಕರ್ತರು ಶ್ರಮಿಸಬೇಕು.
ಸಮಾವೇಶಕ್ಕೆ ದೇವೇಗೌಡ ಗೈರು: ಉಪಚುನಾವಣೆ ಪ್ರಚಾರಕ್ಕೆ ತೆರಳುವ ತರಾತುರಿಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಮಕೂರಿಗೆ ಆಗಮಿಸಿದರೂ ಗುಬ್ಬಿ ಸಮಾವೇಶದಲ್ಲಿ ಭಾಗವಹಿಸಲಿಲ್ಲ, ಹಾಸನದಿಂದ ನೇರವಾಗಿ ತುಮಕೂರು ವಿವಿ ಹೆಲಿಪ್ಯಾಡ್‌ಗೆ ಬಂದಿಳಿದ ದೇವೇಗೌಡ ವಿವಿ ಅತಿಥಿ ಗೃಹದಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಕಾದು ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಉಪಚುನಾವಣೆ ಪ್ರಚಾರಕ್ಕೆ ತೆರಳಿದರು. ಗುಬ್ಬಿಯ ಸಮಾವೇಶದಲ್ಲಿ ದೇವೇಗೌಡ ಕೂಡ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತಾದರೂ ಜಿಪಂ ಮಾಜಿ ಸದಸ್ಯರುಗಳ ಪಕ್ಷ ಸೇರ್ಪಡೆ ಎಂಬ ಕಾರಣಕ್ಕೆ ಸಮಾವೇಶಕ್ಕೆ ಹಾಜರಾಗದೆ ದೂರದಿಂದಲೇ ತಿಳಿದುಕೊಂಡರು. ತುಮಕೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕುಮಾರಸ್ವಾಮಿ ನಡೆಯನ್ನು ಸಮರ್ಥಿಸಿಕೊಂಡರು.
ವಾಸು ಮನವೊಲಿಸುವ ಎಲ್ಲ ದಾರಿ ಮುಚ್ಚಿದೆ: ಗುಬ್ಬಿ ಶಾಸಕ ಶ್ರೀನಿವಾಸ್ ಮನವೊಲಿಸುವ ಪ್ರಯತ್ನ ನಡೆಸಿದೆವಾದರೂ ಆ ಮನುಷ್ಯ ಒಂದು ಹಂತ ಮೀರಿ ಮುಂದೆ ಹೋದ ಹಾಗೆ ಕಾಣಿಸುತ್ತಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಉಪಚುನಾವಣೆ ಪ್ರಚಾರಕ್ಕೆ ಸಿಂಧಗಿಗೆ ತೆರಳುವ ಮಾರ್ಗ ಮಧ್ಯೆ ಪುತ್ರ ಎಚ್.ಡಿ.ಕುಮಾರಸ್ವಾಮಿ ಕರೆದೊಯ್ಯಲು ತುಮಕೂರು ವಿಶ್ವವಿದ್ಯಾಲಯದ ಗೆಸ್ಟ್ ಹೌಸ್‌ನಲ್ಲಿ ಸೋಮವಾರ ಕೆಲಹೊತ್ತು ವಿಶ್ರಾಂತಿ ಪಡೆದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಾತಿಗೆ ಮನ್ನಣೆ ನೀಡದ ವಾಸು ಸಂಪರ್ಕಿಸುವ ಎಲ್ಲ ದಾರಿಗಳು ಹಾಗೂ ಪ್ರಯತ್ನಗಳು ಇನ್ನು ನಿಲ್ಲಲಿವೆ. ನನ್ನ ಮಗಳ ಮನೆಗೆ ಕರೆಸಿ ಕುಮಾರಸ್ವಾಮಿ ಜತೆ ಮಾತನಾಡಿಸಲು ಯತ್ನಿಸಿದ್ದೆ. ಅವರು ನನ್ನ ಮಾತಿಗೆ ಬೆಲೆಕೊಡಲಿಲ್ಲ ಎಂದರು. ವಾಸು ತಮ್ಮ ಮನಸಿಗೆ ಬಂದಂತೆ ಹಿಂದೆ ಒಂದು ಮುಂದೆ ಒಂದು ಮಾತನಾಡುತ್ತ ವರಿಷ್ಠರ ಬಗ್ಗೆ ಅಸಮಾಧಾನ ಹಾಗೂ ಭಾವನೆಗಳನ್ನು ವ್ಯಕ್ತಪಡಿಸಿದರು. ಒಬ್ಬ ಎಂಎಲ್‌ಎ, ಎಂಎಲ್ಸಿ ಆಗುವುದು ಅಷ್ಟು ಸುಲಭವಲ್ಲ. ಪಕ್ಷದ ಒಬ್ಬ ಸಮರ್ಥ ನಾಯಕನನ್ನು ಸೋಲಿಸಲು ಬೆಮೆಲ್ ಕಾಂತರಾಜು ಜತೆ ಕೈಜೋಡಿಸಿದ್ದು ನನಗೂ ತಿಳಿದಿದೆ. ತುರುವೇಕೆರೆಗೆ ಹೇಮೆ ನೀರು ಹರಿಸಲು ನಾನು ಕಾರಣ ಎಂದು ತುರುವೇಕೆರೆಯಲ್ಲಿ ಎಂ.ಟಿ.ಕೃಷ್ಣಪ್ಪ ಸೋಲಿಗೆ ಕಾರಣದವರ ಬಗ್ಗೆ ಸೂಕ್ಷ್ಮವಾಗಿ ತಮ್ಮದೇ ಧಾಟಿಯಲ್ಲಿ ಗೌಡರು ಛಾಟಿ ಬೀಸಿದರು.
ಸತ್ಯಣ್ಣನನ್ನು ಮಂತ್ರಿಮಾಡದೆ ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡಿ ಕುಂಚಿಟಿಗರ ವಿರೋಧ ಕಟ್ಟಿಕೊಂಡೆ, 2004ರಲ್ಲಿ ಜೆಡಿಎಸ್ ಟಿಕೆಟ್ ತಪ್ಪಿದಾಗ ಸ್ವತಂತ್ರವಾಗಿ ಸ್ಪರ್ಧಿಸಲು ನಾನೇ ಸಲಹೆ ನೀಡಿದ್ದೆ, ಈಗ ಡಿ.ಕೆ.ಶಿವಕುಮಾರ್ ಮಾತು ಕೇಳಿಕೊಂಡು ನನ್ನ ಹಾಗೂ ಪಕ್ಷದ ವಿರುದ್ಧ ಮಾತನಾಡಲಾರಂಭಿಸಿದ್ದಾರೆ. ಅನ್ಯಪಕ್ಷಕ್ಕೆ ಹೋಗುವುದಾದರೆ ಕೂಡಲೇ ಹೋಗಲಿ ಶುಭಹಾರೈಸುತ್ತೇನೆ ಆದರೆ, ಇಲ್ಲಿಯೇ ಇದ್ದು ನಂಬಿಸಿ ಕುತ್ತಿಗೆ ಕುಯ್ಯುವುದು ಬೇಡ. ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಯಾವ ಹುಡುಗನನ್ನು ಕರೆದುಕೊಂಡು ಬಂದು ಎಂಎಲ್ಸಿ ಮಾಡಿದ್ವೋ ಅವರ ತಂದೆ ಕೊಲೆ ಆದಾಗ ಅವನಿಗೆ ಎಷ್ಟು ಸಹಾಯ ಮಾಡಿದ್ವಿ. ಈಗ ಅದೆಲ್ಲಾ ಇತಿಹಾಸ. ಗುಬ್ಬಿಯಲ್ಲಿನ ಇವತ್ತಿನ ಸಮಾವೇಶ ವಾಸು ಭೇಟಿ ಮಾಡಿ ಮನವೊಲಿಸುವ ಎಲ್ಲ ದಾರಿಯನ್ನು ಮುಚ್ಚಿಸಿದೆ. ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ