ಎಲ್‌ಆರ್‌ಎಸ್, ಡಿಕೆಶಿ ವಿರುದ್ಧ ಜೆಡಿಎಸ್ ಮುಖಂಡರ ಪ್ರತಿಭಟನೆ

21M.D.R.5
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಎಲ್.ಆರ್. ಶಿವರಾಮೇಗೌಡ ಹಾಗೂ ಡಿ.ಕೆ. ಶಿವಕುಮಾರ್ ಅವರ ಭಿತ್ತಿಪತ್ರಗಳಿಗೆ ಬೆಂಕಿ ಹಾಕಿ ಪ್ರತಿಭಟಿಸಿದರು. ಕೋಣಸಾಲೆ ಮಧು, ಕೆ.ವಿ.ಪ್ರಸಾದ್, ಎಂ.ಎಸ್.ಲೋಕೇಶ್, ದಯಾನಂದ, ನಾಗೇಶ ಇದ್ದರು.
Published on

ಮದ್ದೂರು: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಎಲ್.ಆರ್. ಶಿವರಾಮೇಗೌಡ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಿತ್ತಿಪತ್ರಗಳಿಗೆ ಬೆಂಕಿ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಮುಖಂಡ ಕೋಣಸಾಲೆ ಮಧು ಮಾತನಾಡಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬಗ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರದ್ದೋ ಸಮಾಧಿಯ ಮೇಲೆ ರಾಜಕಾರಣ ಮಾಡಲು ಹೊರಟಿರುವ ಎಲ್.ಆರ್. ಶಿವರಾಮೇಗೌಡ ಅವರಿಗೆ ಶೋಭೆ ತರುವುದಿಲ್ಲ. ಎಚ್.ಡಿ.ದೇವೇಗೌಡ ಅವರು ಪ್ರಧಾನಮಂತ್ರಿಯಾಗಿ, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಹಾಗೂ ಹಲವು ಜನರಿಗೆ ರಾಜಕೀಯ ಜನ್ಮ ನೀಡಿರುವ ಎಚ್.ಡಿ. ದೇವೇಗೌಡ ಅವರ ಸಾವನ್ನು ಬಯಸಿರುವುದು ಹೇಯ ಕೃತ್ಯ ಎಂದು ಶಿವರಾಮೇಗೌಡ ಅವರ ನಡೆಯನ್ನು ಖಂಡಿಸಿದರು.

ಕಾಲಿಗೆ ಬಿದ್ದು ಕ್ಷಮೆ ಕೇಳಲಿ: ಜೆಡಿಎಸ್ ಪಕ್ಷ ಎಲ್.ಆರ್.ಶಿವರಾಮೇಗೌಡ ಅವರಿಗೆ ಕಳೆದ ಲೋಕಸಭೆಯ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ ಅವರ ಗೆಲುವಿಗೆ ಕಾರಣವಾಗಿತ್ತು. ಜೆಡಿಎಸ್ ಪಕ್ಷದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠರನ್ನು ಮನಬಂದಂತೆ ನಿಂದಿಸಿ ಪಕ್ಷದಿಂದ ಉಚ್ಚಾಟನೆಯಾಗಿದ್ದರು. ಈಗ ಬಿಜೆಪಿ ಪಕ್ಷದಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತಿರುವ ಇವರು ಅಪ್ರಭುದ್ಧ ರಾಜಕಾರಣಿಯಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ರಾಜಕಾರಣಿಗಳಿಗೆ ಯಾವುದೇ ನೆಲೆ ಇರುವುದಿಲ್ಲ ಕೂಡಲೇ ಬಹಿರಂಗವಾಗಿ ಇಲ್ಲವೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್.ಆರ್.ಶಿವರಾಮೇಗೌಡ ಜಿಲ್ಲೆಗೆ ಬಂದಾಗ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಕೆ.ವಿ.ಪ್ರಸಾದ್, ಎಂ.ಎಸ್.ಲೋಕೇಶ್, ದಯಾನಂದ, ನಾಗೇಶ, ಹನುಮಂತ, ಶಿವನಂಜಯ್ಯ, ಪ್ರಸನ್ನ, ಗಿರೀಶ್, ಚನ್ನಕೇಶವ, ರಾಧಾಕೃಷ್ಣ, ವೆಂಕಟೇಶ್, ವಾಸು, ಅಭಿಷೇಕ್, ಬಾಬು ಗೋವಿಂದ ಹರಿಪ್ರಸಾದ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net