ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಡಿಜಿಪಿ ಅಪಮಾನ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ

JDS leaders press conference Mandya
Published on

ಮಂಡ್ಯ: ಎರಡು ಬಾರಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಎಡಿಜಿಪಿ ಚಂದ್ರಶೇಖರ್ ಲಘುವಾಗಿ ಮಾತನಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆಂದು ಜೆಡಿಎಸ್ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿ ಜನನಾಯಕರೊಬ್ಬರ ಬಗ್ಗೆ ತನ್ನ ವ್ಯಾಪ್ತಿ ಮೀರಿ ಮಾತನಾಡುವ ಹಕ್ಕು ನೀಡಿದವರ‌್ಯಾರು?. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದು ಅಧಿಕಾರಿಯ ಪದ ಬಳಕೆಯಿಂದ ವ್ಯಕ್ತವಾಗುತ್ತಿದೆ. ಆಂಧ್ರ ಮೂಲದ ಅಧಿಕಾರಿ ಕಳೆದ ಎಂಟು ವರ್ಷದಿಂದಲೂ ಬೆಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಹುನ್ನಾರವೇನೆಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯಪಾಲರ ಕಚೇರಿಯನ್ನೂ ತಪಾಸಣೆ ಮಾಡಬೇಕೆಂದು ಹೇಳುವ ಅಧಿಕಾರವನ್ನು ಪೊಲೀಸ್ ಅಧಿಕಾರಿಗೆ ಯಾರು ನೀಡಿದರು. ಈ ಘಟನೆಯಿಂದ ಪ್ರಜಾಪ್ರಭುತ್ವದ ಮೌಲ್ಯ ಕುಸಿದಿದೆ. ಈ ತಲೆತಗ್ಗಿಸುವ ಘಟನೆ ಸಂಬಂಧ ಮುಖ್ಯ ಕಾರ್ಯದರ್ಶಿ ಕ್ರಮ ವಹಿಸಿ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಜನಪ್ರತಿನಿಧಿ ಅಪರಾಧವೆಸಗಿದ್ದರೆ ಕಾನೂನು ರೀತಿಯ ಕ್ರಮವಾಗಲಿ. ಅದಕ್ಕೆ ನ್ಯಾಯಾಲಯ ಮತ್ತು ಕಾನೂನು ತನ್ನ ಕರ್ತವ್ಯ ನಿಭಾಯಿಸುತ್ತದೆ. ಇಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಲಜ್ಜೆಗೇಡಿತನದ ಹೇಳಿಕೆ ನೀಡಲು ಅಧಿಕಾರಿಗೆ ಯಾರು ಅಧಿಕಾರ ನೀಡಿದರು, ಇದನ್ನು ಕಾಂಗ್ರೆಸ್ ಸರ್ಕಾರ ಒಪ್ಪುವುದಾದರೆ ಭವಿಷ್ಯದಲ್ಲಿ ಪಶ್ಚಾತಾಪಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಐಪಿಎಸ್ ಅಧಿಕಾರಿ ಚಂದ್ರಶೇಖರ್ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಮರ್ಥಿಸಿಕೊಳ್ಳುವುದು ಗೌರವ ತರುವ ವಿಚಾರವಲ್ಲ. ಅಧಿಕೃತ ಲೆಟರ್‌ಹೆಡ್ ಅಥವಾ ಮೊಹರು ಬಳಸದೆ ಖಾಲಿ ಹಾಳೆಯಲ್ಲಿ ಅಧೀನ ಅಧಿಕಾರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ತಿಳಿಸುವುದು ಕಾನೂನಿಗೆ ವಿರುದ್ಧವಲ್ಲವೇ?. ಯಾವುದೇ ರಾಜಕೀಯ ಪಕ್ಷ ಅಧಿಕಾರಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬಾರದು. ಒಂದೊಮ್ಮೆ ಆ ಕೆಲಸಕ್ಕೆ ಮುಂದಾದಲ್ಲಿ ಪಶ್ಚಾತಾಪ ನಿಶ್ಚಿತ ಎಂಬುದನ್ನು ಆಡಳಿತಗಾರರು ಅರ್ಥೈಸಿಕೊಳ್ಳಬೇಕು. ಈ ಸಂಬಂಧ ರಾಜ್ಯದ ಲೋಕಾಯುಕ್ತರು ಮಧ್ಯಪ್ರವೇಶಿಸಿ ಅಧಿಕಾರಿ ವಿರುದ್ಧ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿ ಮೇಲೆ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಈ ಕುರಿತು ತನಿಖೆಯಾಗಬೇಕು. ಈ ಸಂಬಂಧ ರಾಜ್ಯಪಾಲರಿಗೆ ಮೈತ್ರಿ ಪಕ್ಷಗಳ ಶಾಸಕರು ಮನವಿ ಸಲ್ಲಿಸಲಿದ್ದಾರೆ. ಅವಿವೇಕತನದ ಹೇಳಿಕೆ ನೀಡಿರುವ ದುರಂಹಕಾರಿ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಡಿಜಿಪಿ ವಿರುದ್ಧ ಸಿಬಿಐ ತನಿಖೆಯಾಗಲಿ
ಎಡಿಜಿಪಿ ಚಂದ್ರಶೇಖರ್ ರಾಜಭವನ ಕಚೇರಿ ತನಿಖೆ ನಡೆಸಲು ಅವಕಾಶ ಕೇಳುವ ಮೂಲಕ ರಾಜ್ಯಪಾಲರು ಹಾಗೂ ಜನಪ್ರತಿನಿಧಿಗಳ ಸ್ಥಾನಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಹಲವು ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿ ವಿರುದ್ಧ ಸಿಬಿಐ ತನಿಖೆ ನಡೆಯಬೇಕೆಂದು ಜೆಡಿಎಸ್ ಮಾಜಿ ಶಾಸಕ ಸುರೇಶ್‌ಗೌಡ ಆಗ್ರಹಿಸಿದರು.
ಬೆಂಗಳೂರಿನ ರಾಚೇನಹಳ್ಳಿಯಲ್ಲಿ 8 ಎಕರೆ ಮತ್ತು ನಾಗವಾರದಲ್ಲಿ ಒಂದು ಎಕರೆ ಆಸ್ತಿಯನ್ನು ಎಡಿಜಿಪಿ ಚಂದ್ರಶೇಖರ್ ಹಾಗೂ ಅವರ ಕುಟುಂಬ ಹೊಂದಿದ್ದಾರೆ. ಅವರ ಪತ್ನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೊಡ್ಡ ಗುತ್ತಿಗೆದಾರರಾಗಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಇಂತಹ ಅಧಿಕಾರಿಯಿಂದ ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಅಧಿಕಾರಿ ಒಂದು ಎಕರೆ ಪ್ರದೇಶದಲ್ಲಿ ಕೋಟ್ಯಂತರ ಮೌಲ್ಯದ ಒಂದು ‘ವಿಲ್ಲಾ’ ಹೊಂದಿದ್ದಾರೆ. ಇದರ ನಿರ್ವಹಣೆಗೆ ತಿಂಗಳಿಗೆ 3 ರಿಂದ 4 ಲಕ್ಷ ರೂ ಬೇಕು. 36 ಅಂತಸ್ತಿನ ಮೂರು ಕಟ್ಟಡ ಕಟ್ಟುತ್ತಿದ್ದಾರೆ. ಇದರ ಬಗ್ಗೆ ಸಾಕ್ಷಿ ಸಮೇತ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದರೆ ಅವರ ವಿರುದ್ಧವೇ ಮಾತನಾಡುತ್ತಾರೆ ಎಂದರೆ ಇದಕ್ಕೆಲ್ಲ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಏನೂ ಮಾಡಲು ಸಾಧ್ಯವಿಲ್ಲ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಎಚ್ಚರಿಕೆ ನೀಡಿದರು.
ಚಂದ್ರಶೇಖರ್ ರಾಜಕಾರಣಿಯೋ ಅಥವಾ ಅಧಿಕಾರಿಯೋ ತಿಳಿಯುತ್ತಿಲ್ಲ. ಕಾರ್ಯಾಂಗದ ಭಾಗವಾಗಿರುವ ಅಧಿಕಾರಿ ರಾಜಕಾರಣಿಯಂತೆ ಟೀಕಿಸುವ ಅಧಿಕಾರವನ್ನು ನೀಡಿದವರ‌್ಯಾರು?. ಜನಪ್ರತಿನಿಧಿಯೊಬ್ಬರ ವಿರುದ್ಧ ತಮ್ಮ ಸಹೋದ್ಯೋಗಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತಹ ಅಧಿಕಾರ ಕೊಟ್ಟವರು ಯಾರು?. ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ನ್ಯಾಯಾಲಯಗಳಿವೆ. ಅವುಗಳು ಆ ಕೆಲಸ ಮಾಡುತ್ತವೆ. ಮೊದಲು ನಿಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುವುದನ್ನು ಕಲಿಯಿರಿ. ರಾಜಕಾರಣಕ್ಕೆ ಬರುವುದಾದರೆ ಇಂದೇ ರಾಜೀನಾಮೆ ನೀಡಿ. ನನ್ನ ವಿರುದ್ಧವೇ ನಿಂತು ಗೆಲ್ಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net