

ಮಂಡ್ಯ: ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಈ ಪೈಕಿ ಎರಡು ಬಾರಿ ಅವರು ಜೆಡಿಎಸ್‌ನಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿದಾಗಲೂ ದಳದ ಬೆಂಬಲ ಸಿಕ್ಕಿತ್ತು. ಆದರೆ, ಅವರು ಶಿಕ್ಷಕರ ಪರ ಕೆಲಸ ಮಾಡಿಲ್ಲ ಎಂದು ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಎಂದೂ ಶಿಕ್ಷಕರು ಮತ್ತು ನೌಕರರ ಪರ ನಿಂತಿಲ್ಲ. ಆದರೆ ಜೆಡಿಎಸ್ ಮತ್ತು ಬಿಜೆಪಿ ಶಿಕ್ಷಕರ ಪರ ನಿಂತು ಅವರ ಹಲವು ಬೇಡಿಕೆಗಳನ್ನು ಈಡೇರಿಸಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂದೇ ಬಾರಿಗೆ 60 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1 ಸಾವಿರಕ್ಕೂ ಹೆಚ್ಚು ಶಾಲೆಗಳು, 500 ಪ್ರಥಮ ದರ್ಜೆ ಕಾಲೇಜು, ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣಕ್ಕೆ ಮೊದಲಿನಿಂದಲೂ ಶಿಕ್ಷಕರಿಗೆ ಜನತಾ ಪರಿವಾರದ ಮೇಲೆಯೇ ಹೆಚ್ಚು ಒಲವು ಇದೆ. ಇದರಿಂದಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ವಿವೇಕಾನಂದ ಅವರ ಗೆಲುವು ನೂರಕ್ಕೆ ನೂರಷ್ಟು ಶತಃಸಿದ್ಧ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರ ಸಮಸ್ಯೆಗಳ ಕುರಿತಂತೆ ನಾನು ಮತ್ತು ನಮ್ಮೆಲ್ಲ ಶಾಸಕರು ಹೋರಾಟ ಮಾಡಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಹೋರಾಟದಲ್ಲಿ ನಾನು ಹಲವಾರು ದಿನಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದೆ. ಶಿಕ್ಷಕರ ಸಮಸ್ಯೆಗಳ ಹೋರಾಟಕ್ಕೆ ನಾವು ಎಂದಿಗೂ ಹಿಂದೆ ಬಿದ್ದವರಲ್ಲ. ಹಾಗಾಗಿ ಶಿಕ್ಷಕರು ನಮ್ಮ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನೂ ಕೂಡ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದೆ. ಆದರೆ ನಮ್ಮ ಶಾಸಕರು, ವರಿಷ್ಠರಾದ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಇತರರು ಮುಂದೆ ಅವಕಾಶ ಮಾಡಿಕೊಡೋಣ, ಈಗ ಬೇಡ ಎಂದು ಸಲಹೆ ನೀಡಿದರು. ಸಿದ್ದರಾಮಯ್ಯ ಅವರು ವಿರೋಧ ಮಾಡಿದಾಗಲೂ ದೇವೇಗೌಡರು ನನ್ನ ಪರವಾಗಿದ್ದರು. ಆ ಋಣ ನನ್ನ ಮೇಲಿದ್ದು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದು, ವಿರೋಧಿ ಕೃತ್ಯದಲ್ಲಿ ತೊಡಗುವಂತಹ ಕೆಲಸ ಮಾಡುವುದಿಲ್ಲ. ನಾನು ಇರುವವರೆವಿಗೂ ದೇವೇಗೌಡರ ಜತೆಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆ.ಟಿ.ಶ್ರೀಕಂಠೇಗೌಡರಿಗೆ ಪಕ್ಷ ನಾಲ್ಕು ಬಾರಿ ಅವಕಾಶ ಕಲ್ಪಿಸಿದೆ. ಎರಡು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಸೋತಿದ್ದಾರೆ. ಹಾಗಾಗಿ ದೇವೇಗೌಡರು ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀಕಂಠೇಗೌಡರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ನಮ್ಮ ಅಭ್ಯರ್ಥಿ ವಿವೇಕಾನಂದ ಅವರನ್ನು ಗೆಲ್ಲಿಸುತ್ತೇವೆ. ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯಾರು ಮಾಡಿದ್ದಾರೆ ಏನಾಗಿದೆ ಎಂಬುದು ನಿಧಾನಕ್ಕೆ ಹೊರಬರುತ್ತಿದೆ. ಮುಂದೆ ಎಲ್ಲವೂ ಗೊತ್ತಾಗಲಿದೆ. ಈ ವಿಚಾರವನ್ನು ಇಲ್ಲಿಗೇ ಬಿಡೋಣ. ಸಧ್ಯ ಪ್ರಜ್ವಲ್ ಅವರನ್ನು ಪಕ್ಷ ಅಮಾನತು ಮಾಡಿದೆ. ಹಾಗಾಗಿ ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಜನತಾ ಪರಿವಾರದ ಸರ್ಕಾರದ ಅವಧಿಯಲ್ಲಿ ಗೋವಿಂದೇಗೌಡ ಅವರು ಶಿಕ್ಷಣ ಸಚಿವರಾಗಿದ್ದ ವೇಳೆ ಕೌನ್ಸಿಲಿಂಗ್ ಮೂಲಕ 60 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದ ಹೆಗ್ಗಳಿಕೆ ಇದೆ. ಕುಮಾರಸ್ವಾಮಿ ಅವರು ಸಾವಿರಾರು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ 1.70 ಲಕ್ಷ ಶಿಕ್ಷಕರ ನೇಮಕ ಆಗಿದೆ. ಹಾಗಾಗಿ ಶಿಕ್ಷಕರು ಜೆಡಿಎಸ್ ಪರವಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಅಮರಾವತಿ ಚಂದ್ರಶೇಖರ್, ಸಿದ್ದರಾಮೇಗೌಡ, ಬೂದನೂರು ಸ್ವಾಮಿ ಇತರರಿದ್ದರು.