ಗುತ್ತಿಗೆ ಸಿಗದಂತೆ ಪ್ಯಾಕೇಜ್ ಮಾಡಿಸಿದ ಸಚಿವರು: ಕೆಸಿಎನ್ ವಿರುದ್ಧ ಜೆಡಿಎಸ್ ಮುಖಂಡ ಸಂತೋಷ್ ಕುಮಾರ್ ಆರೋಪ

13 krp 02
Published on

ಕೆ.ಆರ್.ಪೇಟೆ: ಸಣ್ಣ ಗುತ್ತಿಗೆದಾರರಿಗೆ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಸಿಗದಂತೆ ಸಚಿವ ಕೆ.ಸಿ.ನಾರಾಯಣಗೌಡ ವ್ಯವಸ್ಥಿತವಾಗಿ ಪ್ಯಾಕೇಜ್ ಮಾಡಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಕೆ.ಎಸ್.ಸಂತೋಷ್ ಕುಮಾರ್ ಆರೋಪಿಸಿದ್ದಾರೆ.

ನಿರುದ್ಯೋಗಿ ಯುವಕರು ತುಂಡು ಗುತ್ತಿಗೆ ಕಾಮಗಾರಿ ನಿರ್ವಹಿಸಿ ಜೀವನ ನಡೆಸುತ್ತಿದ್ದರು. ಈಗ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಮಾಜಿ ಶಾಸಕರಾದ ಕೃಷ್ಣ, ಬಿ.ಪ್ರಕಾಶ್ ಮತ್ತು ಕೆ.ಬಿ.ಚಂದ್ರಶೇಖರ್ ಅವರ ಆಡಳಿತದ ಅವಧಿಯಲ್ಲಿ ಯಾವುದೇ ಪ್ಯಾಕೇಜ್ ಸಂಸ್ಕೃತಿ ಇಲ್ಲದೆ ಗುತ್ತಿಗೆದಾರರಿಗೆ ಸಮಸ್ಯೆ ನೀಡಿರಲಿಲ್ಲ. ಗುತ್ತಿಗೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರಲಿಲ್ಲ. ಈಗ ಸಚಿವರು ತುಂಡು ಗುತ್ತಿಗೆ ಕಾಮಗಾರಿಗಳನ್ನು ಬಂದ್ ಮಾಡಿ, ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವ ಮೂಲಕ ತಮ್ಮ ಅಕ್ಕಪಕ್ಕ ಇರುವ ನಾಲ್ಕೈದು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತಿದ್ದು, ಶೇ.90ರಷ್ಟು ಸಣ್ಣ ಗುತ್ತಿಗೆದಾರರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಮಗಾರಿಗಳಿಗೆ ಸರ್ಕಾರ ಟೆಂಡರ್ ಕರೆಯುತ್ತದೆ. ಪಾಲ್ಗೊಂಡವರಿಗೆ ಗುತ್ತಿಗೆ ಸಿಗುವುದಿಲ್ಲ. 1 ಕೋಟಿ ರೂ.ವರೆಗಿನ ಕಾಮಗಾರಿಗಳಿಗೆ ನಿಯಮಾವಳಿಗಳ ಪ್ರಕಾರ ಯಾವುದೇ ಷರತ್ತುಗಳನ್ನು ಹಾಕುವಂತಿಲ್ಲ. ತಾಲೂಕಿನಲ್ಲಿ ಸಚಿವರು ತಮ್ಮ ಆಪ್ತರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಪ್ರಭಾವ ಬೀರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಯಮಗಳನ್ನು ಗಾಳಿಗೆ ತೂರಿ ಆಪ್ತರನ್ನು ಹೊರತುಪಡಿಸಿ ಬೇರಾರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.

ಸಚಿವರ ಆಶಯಕ್ಕೆ ವಿರುದ್ಧವಾಗಿ ಟೆಂಡರ್ ಹಾಕಿದರೆ ಅಧಿಕಾರಿಗಳಿಂದ ಬೆದರಿಸಿ ಅಂಥ ಗುತ್ತಿಗೆದಾರರನ್ನು ಹೊರಹಾಕುವ ಮೂಲಕ ಸಚಿವರ ಕೆಲವೇ ಕೆಲವು ಹಿಂಬಾಲಕರಿಗೆ ಸಿಗುವ ಹಾಗೆ ನೋಡಿಕೊಳ್ಳುತ್ತಾರೆ. ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನೇ ಬಿಟ್ಟಿದ್ದಾರೆಂದು ದೂರಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಅವರ ಮುಂದೆಯೇ ಬಿಜೆಪಿ ಕಾರ್ಯಕರ್ತರು ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

1700 ಕೋಟಿ ರೂ.ಅನುದಾನ ತಂದು ಶಿಕಾರಿಪುರ ಮಾದರಿ ಮಾಡುತ್ತಿದ್ದೇನೆಂದು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ತಾಲೂಕಿನ ಯಾವೊಂದು ರಸ್ತೆಯೂ ಅಭಿವೃದ್ಧಿ ಹೊಂದಿಲ್ಲ. ಎಲ್ಲಿ ನೋಡಿದರೂ ಗುಂಡಿ ಬಿದ್ದಿರುವ ರಸ್ತೆಗಳೇ ಕಣ್ಣಿಗೆ ಗೋಚರಿಸುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಸಚಿವರು ಸ್ವಂತ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ಹೇಮಾವತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಗದ್ದೆ ಹೊಸೂರು ದರ್ಶನ್, ಗ್ರಾಮ ಪಂಚಾಯಿತಿ ಸದಸ್ಯ ಬಂಡೀಹೊಳೆ ದರ್ಶನ್, ಮುಖಂಡ ಆಲೇನಹಳ್ಳಿ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net