

ಮಂಡ್ಯ: ಗುಂಡಿಮಯ ರಸ್ತೆಗಳಿಂದ ಸಾರ್ವಜನಿರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕ್ರಮವಹಿಸುವಲ್ಲಿ ವಿಫಲವಾಗಿದೆ. ಇದೊಂದು ಕಣ್ಣು, ಕಿವಿಯಿಲ್ಲದ ಜನ ವಿರೋಧಿ ಸರ್ಕಾರ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಕಲ್ಲಹಳ್ಳಿಯಲ್ಲಿ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಮುಚ್ಚುವ ಅಭಿಯಾನದ ವೇಳೆ ಮಾತನಾಡಿ, ಹಾಳಾದ ರಸ್ತೆಯಿಂದ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಕೆಲವರು ದೊಡ್ಡಮಟ್ಟದಲ್ಲಿಯೇ ಗಾಯಗೊಂಡಿದ್ದಾರೆ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಇಷ್ಟೊಂದು ನಿರ್ಲಕ್ಷೃ ಒಳ್ಳೆಯದಲ್ಲ. ಇದೇ ರೀತಿ ವರ್ತನೆ ತೋರುತ್ತಿದ್ದರೆ ಮುಂದಿನ ದಿನದಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ನನ್ನ ಸ್ವಂತ ಖರ್ಚಿನಲ್ಲಿ ರಸ್ತೆಯಲ್ಲಿನ ಗುಂಡಿ ಮುಚ್ಚುವ ಅಭಿಯಾನ ಪ್ರಾರಂಭಿಸಲಾಗಿದೆ. ನಗರದ ಹಲವು ಬಡಾವಣೆ ಹಾಗೂ ಗ್ರಾಮಗಳಿಂದ ಕರೆಬರುತ್ತಿವೆ. ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನಮ್ಮ ಭಾಗದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಎಂದು ಮನವಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ಮಾಡಲು ಅಭಿಯಾನ ನಡೆಸುತ್ತಿದ್ದೇನೆ. ಜನರ ಮಾತುಗಳು ಸೇವೆಗೆ ಇನ್ನಷ್ಟು ಉತ್ತೇಜನ ನೀಡುತ್ತಿದೆ.ನನ್ನಿಂದಾಗುವ ಸೇವಾ ಕಾರ್ಯ ನಡೆಸುತ್ತಿದ್ದೇನೆ ಎಂದು ಹೇಳಿದರು.
ಮುಖಂಡರಾದ ವೆಂಕಟೇಶ್, ಅನಿಲ್‌ಗೌಡ, ಶಶಿ, ಚಂದ್ರು ಹಾಜರಿದ್ದರು.