

ಪೀಣ್ಯ ದಾಸರಹಳ್ಳಿ: ವಿಧಾನಸಭಾ ಕ್ಷೇತ್ರದ ಚಾಮುಂಡಿಪುರ, ಮಂಜುನಾಥ ಪಾರ್ಕ್, ಪೀಣ್ಯ 2ನೇ ಹಂತ ಮುಂತಾದೆಡೆ ಕಾಂಗ್ರೆಸ್ ಅಭ್ಯರ್ಥಿ ದಾಸರಹಳ್ಳಿ ಜಿ. ಧನಂಜಯ ಗೌಡ ಅವರು ನೂರಾರು ಕಾರ್ಯಕರ್ತರೊಂದಿಗೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.
ಬಳಿಕ ಮಾತನಾಡಿದ ಅವರು, ದಾಸರಹಳ್ಳಿ ಕ್ಷೇತ್ರದಲ್ಲಿ ಕಳಪೆ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಕೆರೆ ಅಭಿವೃದ್ಧಿ ಕಾಣದೆ ಇರುವುದು ಹೀಗೆ ಹಲವಾರು ಸಮಸ್ಯೆಗಳಿವೆ. ನೂರಾರು ಕೋಟಿ ರೂ. ಅನುದಾನ ಬಂದಿದ್ದರೂ ಇಲ್ಲಿನ ಶಾಸಕರು ಲೂಟಿ ಹೊಡೆದಿದ್ದಾರೆ. ಇದರ ವಿರುದ್ಧವಾಗಿ ಅನೇಕ ಬಾರಿ ಹೋರಾಟ ಮಾಡಿದ್ದೇನೆ. ಮೂಲಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ದಾಸರಹಳ್ಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಒಮ್ಮೆ ನನಗೆ ಮತ ನೀಡಿ, ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು ಗೃಹಲಕ್ಷ್ಮೀ, ಯುವ ನಿಧಿ, 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆ ನೀಡಲಾಗುತ್ತದೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ತೊರೆದ ಕೃಷ್ಣ, ವಿಜಯ್, ಗಂಗಯ್ಯ, ಶಿವಕುಮಾರ್, ಚಿಕ್ಕರಾಮಯ್ಯ, ಶಿವಣ್ಣ, ನಾಗರಾಜಯ್ಯ, ಗಂಗಾಧರಯ್ಯ ಕಾಂಗ್ರೆಸ್ ಸೇರ್ಪಡೆಯಾದರು. ಕಾಂಗ್ರೆಸ್ ಮುಖಂಡರಾದ ಮುತ್ತುಜಾ, ಉಷಾರಾಣಿ, ಹರೀಶ್, ಗೀತಾ, ಸಂತೋಷ್, ಸುರೇಶ್, ಮಂಜುನಾಥ್, ಜಯಲಕ್ಷ್ಮೀ ಇತರರಿದ್ದರು.