

ನೆಲಮಂಗಲ: ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಭೀಷ್ಮನೆಂದೇ ಪ್ರಸಿದ್ಧವಾಗಿದ್ದ ಭವಾನಿ ಶಂಕರ್ ಬೈರೇಗೌಡ ಮತ್ತವರ ಪುತ್ರ ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು, ಕ್ಷೇತ್ರ ರಾಜಕಾರಣದಲ್ಲಿ ಹೊಸ ತಿರುವಿಗೆ ಎಡೆ ಮಾಡಿಕೊಟ್ಟಿದೆ.
ಕರೆಕಲ್ ಕ್ರಾಸ್ ತಿರುವಿನಲ್ಲಿರುವ ತೋಟದ ಮನೆಯಲ್ಲಿ ಮಂಗಳವಾರ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದ ಬೈರೇಗೌಡ, ಪುತ್ರ ಮಂಜುನಾಥ್ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಮುಖಂಡರಾದ ಬೈರೇಗೌಡ ಮತ್ತು ಗಂಗಹನುಮಯ್ಯ ಸೇರಿ ಹಲವು ಮುಖಂಡರು 80 ದಶಕದಿಂದಲೂ ದೇವೇಗೌಡರ ಜತೆಯಲ್ಲಿದ್ದು, ಬಲ ತುಂಬಿದವರು. ದೇವೇಗೌಡರ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಬೆಳವಣಿಗೆಯಲ್ಲಿ ಈ ಭಾಗದ ಜನರ ಕೊಡುಗೆ ಅಪಾರ. ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದರು. ಈಗ ಮತ್ತೆ ಮಾತೃಪಕ್ಷಕ್ಕೆ ಬಂದಿರುವುದು ಪಕ್ಷದ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ರಾಜ್ಯವನ್ನಾಳಿದ ಎರಡೂ ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ. ಆದ್ದರಿಂದ ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಷ್ಟ್ರೀಯ ಪಕ್ಷಗಳನ್ನು ಕಿತ್ತು ಹಾಕಿ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದರು.
ವಿಶ್ವಾಸ ದ್ರೋಹಿಗಳನ್ನು ದೂರವಿರಿಸಿ: ಕ್ಷೇತ್ರದ ಕೆಲವರನ್ನು ಜೆಡಿಎಸ್‌ನಿಂದಲೇ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಮಾಡುವ ಜತೆಗೆ ವಿಧಾನಪರಿಷರ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸೇರ್ಪಡೆಯಾದರು. ಅಂಥ ವಿಶ್ವಾಸ ದ್ರೋಹಿಗಳನ್ನು ಕ್ಷೇತ್ರದ ಜನತೆ ದೂರವಿರಿಸಬೇಕು ಎಂದರು.
ಕಾಂಗ್ರೆಸ್ ಡಕೋಟ ಬಸ್: ರಾಜ್ಯದಲ್ಲಿರುವ ಕಾಂಗ್ರೆಸ್ ಡಕೋಟ ಬಸ್ ಇದ್ದಂತೆ, ಹಾಸನದಲ್ಲಿ ಬಸ್ ಹತ್ತಿಸೋಕೆ ಬಂದು ಜನ ಮನೆಗೆ ಕಳಿಸಿದ್ರು. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಜನತೆ ಮನೆಗೆ ಕಳಿಸಲಿದ್ದಾರೆ ಎಂದು ರೇವಣ್ಣ ಲೇವಡಿ ಮಾಡಿದರು.
ಮುಖಂಡ ಭವಾನಿಶಂಕರ್ ಬೈರೇಗೌಡ ಮಾತನಾಡಿ, 80 ದಶಕದಿಂದಲೂ ಜೆಡಿಎಸ್‌ಗೆ ನಿಷ್ಠಾವಂತ ಕಾರ್ಯಕರ್ತನಾಗಿದ್ದೆ. ಆದರೆ ಕೆಲ ವ್ಯಕ್ತಿಗಳಿಂದಾಗಿ ಪಕ್ಷ ತೊರೆದಿದ್ದೆ. ಬಿಜೆಪಿಯಲ್ಲಿ ಕೆಲವರು ಸಿಗಬೇಕಾದ ಸ್ಥಾನಮಾನ ತಪ್ಪಿಸಿದರು. ಇದರಿಂದ ಬೇಸತ್ತಿದ್ದೆ. ಬೆಂಬಲಿಗರ ಒತ್ತಾಸೆಯಂತೆ ಜೆಡಿಎಸ್ ಸೇರ್ಪಡೆ ಆಗಿದ್ದೇನೆ ಎಂದರು.
ಕ್ಷೇತ್ರ ರಾಜಕಾರಣದಲ್ಲಿ ಅನುಭವಿಗಳು ಆಗಿದ್ದ ಬೈರೇಗೌಡ ಹಾಗೂ ಬೆಂಬಲಿಗರು ಜೆಡಿಎಸ್‌ಗೆ ಸೇರ್ಪಡೆ ಆಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಕಾಲಕಾಲಕ್ಕೆ ಪಕ್ಷ ಸಂಘಟನೆ, ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮನವಿ ಮಾಡಿದರು.
ಬಿಜೆಪಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ: ಭವಾನಿಶಂಕರ್ ಬೈರೇಗೌಡ, ಪುತ್ರ ಎಚ್.ಬಿ.ಮಂಜುನಾಥ್, ಬೆಂಬಲಿಗರಾದ ಯಂಟಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು, ಸದಸ್ಯರಾದ ಕವಿತಾ ಚೆನ್ನಕೇಶವ್, ಮಹಾಂತೇಶ್, ಗಂಗಾಮಣಿ, ಹೊನ್ನಲಕ್ಷ್ಮಮ್ಮ, ರೇಣುಕಮ್ಮಸಿದ್ದರಾಜು, ಕೆಎಂಎಸ್ ರಾಜಣ್ಣ, ಮಾಜಿ ಅಧ್ಯಕ್ಷೆ ಗೀತಾ, ಮಾಜಿ ಸದಸ್ಯ ಮೈಲಾರಪ್ಪ, ಸೋಲದೇವನಹಳ್ಳಿ ಗ್ರಾಪಂ ಸದಸ್ಯ ಸಂದೀಪ್‌ಕುಮಾರ್, ಮಾಜಿ ಸದಸ್ಯ ಶಶಿ, ಹಂಚಿಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಕಾಂಗ್ರೆಸ್ ಕಾರ್ಮಿಕ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲ ಕನಕರಾಜು, ಬೆಂಬಲಿಗರಾದ ಕೇಶವಮೂರ್ತಿ, ಎಚ್.ಮಧು, ಶ್ರೀಧರ್, ರಾಮಾಂಜಿನಪ್ಪ, ಮುನಿರಾಜು, ಲಕ್ಷ್ಮೀನಾರಾಯಣ್ ಇತರರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್ ರಾಜು,ಉಪಾಧ್ಯಕ್ಷ ಹನುಮಂತರಾಜು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯಣ್ಣ, ಕಸಬಾ ಹೋಬಳಿ ಅಧ್ಯಕ್ಷ ಕೆಂಪರಾಜು, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ಸೋಲೂರು ಹೋಬಳಿ ಅಧ್ಯಕ್ಷ ಎಸ್.ಸಿ.ಬಿ.ಶಿವರುದ್ರಪ್ಪ, ಜಿಪಂ ಮಾಜಿ ಸದಸ್ಯ ಪುಷ್ಪಾಸಂಪತ್ ಬಾಬು, ಸೋಲದೇವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಸಂಪತ್‌ಬಾಬು, ಮಾಜಿ ಸದಸ್ಯ ಜಿ.ಎಚ್.ಗೌಡ್ರು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪಟೇಲ್ ವೆಂಕಟೇಶಪ್ಪ, ಮಾಜಿ ನಿರ್ದೇಶಕ ಹನುಮೇಗೌಡ, ಯಂಟಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎನ್.ಸುರೇಶ್, ತಾಪಂ ಮಾಜಿ ಸದಸ್ಯ ವರದನಾರಾಯಣ್, ಬಮುಲ್ ಮಾಜಿ ನಿರ್ದೇಶಕ ತಿಮ್ಮರಾಜು, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ವಾಜರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಮಂಜಮ್ಮ, ಮುಖಂಡರಾದ ಕೋಡಪ್ಪನಹಳ್ಳಿವೆಂಕಟೇಶ್, ಡಿ.ಸಿ.ಗಂಗಾಧರ್‌ಗೌಡ, ಶಿವಕುಮಾರ್, ರಮೇಶ್, ಮಂಜುನಾಥ್, ಬಾಲಕೃಷ್ಣ, ಜಯರಾಮ್, ಡಿ.ಎಸ್.ಸುರೇಶ್, ಧನಲಕ್ಷ್ಮೀಮ್ಮ ಮತ್ತಿತರರು ಉಪಸ್ಥಿತರಿದರು.