

ಮಧುಗಿರಿ: ತಾಲೂಕಿನಲ್ಲಿ ಜೆಡಿಎಸ್ ಸದೃಢವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯನ್ನು ಎಂ.ವಿ.ವೀರಭದ್ರಯ್ಯ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಬಲಿಷ್ಠವಾಗಿದ್ದು, ಈ ಕ್ಷೇತ್ರದಲ್ಲಿ 3 ಬಾರಿ ಜೆಡಿಎಸ್ ಅಭ್ಯರ್ಥಿಗಳು ಶಾಸಕರಾಗಿ ಹೇಗೆ ಆಯ್ಕೆಯಾದರು ಎಂದು ತಿಳಿಸಿದರು.
ಮುಖಂಡ ಸಿಡದರಗಲ್ಲು ಶ್ರೀನಿವಾಸ್ ಮಾತನಾಡಿ, ಜಿಪಂ, ತಾಪಂ ಚುನಾವಣೆಯನ್ನು ಬಿಜೆಪಿಯವರು 6 ತಿಂಗಳು ಮುಂದೂಡಿದರೆ ಕಾಂಗ್ರೆಸ್‌ನವರು ಎರಡೂವರೆ ವರ್ಷ ಮುಂದೂಡಿದ್ದಾರೆ. ಮಧುಗಿರಿಯಲ್ಲಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವರು ನಮ್ಮ ಪಕ್ಷ ದೇಶದಲ್ಲಿ ಎಲ್ಲಿದೆ ಎಂಬುದನ್ನು ಅವರು ಮೊದಲು ತಿಳಿದುಕೊಳ್ಳಬೇಕು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗತಿ ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಂಧ್ರಕ್ಕೆ ಗುಳೆ ಹೊರಟಿದ್ದ ಕಂಪನಿಯನ್ನು ಸಂಸದ ಕುಮಾರಸ್ವಾಮಿ ಮತ್ತು ದೇವೇಗೌಡರು ತಡೆದು ಅವರಿಗೆ ಭರವಸೆ ನೀಡಿ ಉಳಿಸಿಕೊಂಡಿದ್ದಾರೆ. ಸತ್ಯ ಹೇಳಿದ ಶಾಸಕ ರಾಜಣ್ಣ ಅವರನ್ನೇ ಸಚಿವ ಸ್ಥಾನದಿಂದ ತೆಗೆದರು. ರಾಹುಲ್ ಗಾಂಧಿ ದೇಶದ ಮರ್ಯಾದೆಯನ್ನು ವಿದೇಶದಲ್ಲಿ ಹರಾಜು ಹಾಕುತ್ತಿದ್ದಾರೆ. ನಿಮ್ಮ ಮನೆ ನೀವು ಸರಿ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.
ಮುಖಂಡ ವೆಂಕಟಾಪುರ ಗೋವಿಂದರಾಜು ಮಾತನಾಡಿ, ಮುಂದಿನ ಎರಡು ವರ್ಷದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇವೆ ಎಂದರು.