ಜೆಡಿಎಸ್ ಈಗ ನಾವಿಕನಿಲ್ಲದ ದೋಣಿ: ಕಲಾಪದಲ್ಲಿ ಎಚ್​ಡಿಕೆಗೆ ನಿರಾಸಕ್ತಿ, ಸದಸ್ಯರಿಗೆ ಅನಾಸಕ್ತಿ

HDK
Published on

ಬೆಂಗಳೂರು: ಮೈತ್ರಿ ಸರ್ಕಾರ ಪತನ ನಂತರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಆಸಕ್ತಿ ಕಳೆದುಕೊಂಡಂತೆ ಕಾಣುತ್ತಿದೆ. ಮೈತ್ರಿ ಸರ್ಕಾರಕ್ಕೆ 17 ಶಾಸಕರು ಕೊಟ್ಟ ಏಟಿನಿಂದ ಎಚ್​ಡಿಕೆ ಇನ್ನೂ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿಲ್ಲ. ಇದಕ್ಕೆ ಸಾಕ್ಷಿ ವಿಧಾನಮಂಡಲ ಅಧಿವೇಶನ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಕುಮಾರಸ್ವಾಮಿ ಈ ಬಾರಿ ಅಧಿವೇಶನದಲ್ಲಿ ಕಾಣಿಸಿಕೊಂಡದ್ದು ತೀರಾ ಅಪರೂಪ. ಒಂದು ದಿನ ಭಾಗವಹಿಸಿದ್ದನ್ನು ಬಿಟ್ಟರೆ, ಮಗ ನಿಖಿಲ್ ಮದುವೆ ನೆಪದಲ್ಲಿ ಕಲಾಪದತ್ತ ಸುಳಿಯುತ್ತಿಲ್ಲ. ಹೀಗಾಗಿ ವಿಧಾನಸಭೆ ಅಧಿವೇಶನದಲ್ಲಿ ಜೆಡಿಎಸ್ ನಾವಿಕನಿಲ್ಲದ ದೋಣಿಯಾಗಿದೆ. ಪ್ರಮುಖ ವಿಷಯಗಳ ಚರ್ಚೆಯಲ್ಲೂ ಕುಮಾರಸ್ವಾಮಿ ಸರಿಯಾಗಿ ಭಾಗವಹಿಸಿಲ್ಲ. ಜೆಡಿಎಲ್​ಪಿ ಸಭೆಗಳು ಕೂಡ ನೆಪ ಮಾತ್ರಕ್ಕೆ ಎಂಬಂತಾಗಿವೆ. ಎರಡು ಬಾರಿ ಶಾಸಕಾಂಗ ಸಭೆ ಕರೆದರೂ, ಕಾಟಾಚಾರಕ್ಕೆಂಬಂತೆ ನಡೆದಿವೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಜೆಡಿಎಸ್ ತಟಸ್ಥ ನಿಲುವು ತಳೆದಂತೆ ಕಾಣುತ್ತಿದೆ. ಕಾಂಗ್ರೆಸ್ ಪ್ರಮುಖ ವಿಷಯಗಳನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಹರಿತ ಕತ್ತಿ ಝುಳಪಿಸುತ್ತಿದ್ದರೆ, ಜೆಡಿಎಸ್ ಸದಸ್ಯರು ಮಂಕಾದಂತೆ ಕಾಣುತ್ತಾರೆ. ಪ್ರಶ್ನೋತ್ತರ ಕಲಾಪ, ಸಂವಿಧಾನ ಮೇಲಿನ ಚರ್ಚೆಯಲ್ಲಿ ವೈಯಕ್ತಿಕವಾಗಿ ಭಾಗವಹಿಸಿದರೆ ವಿನಾ ಸಾಮೂಹಿಕವಾಗಿ ಸೇರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಇದುವರೆಗೂ ಮಾಡಿಲ್ಲ.

ಬಿಜೆಪಿ-ಕಾಂಗ್ರೆಸ್ ಒಬ್ಬರ ಮೇಲೊಬ್ಬರು ಮುಗಿಬಿದ್ದು, ಜಿದ್ದಾಜಿದ್ದಿನ ರಾಜಕಾರಣ ಮಾಡುತ್ತಿದ್ದರೆ, ಎಚ್.ಡಿ. ರೇವಣ್ಣ, ಜೆಡಿಎಸ್ ಮೇಲೆ 144 ಸೆಕ್ಷನ್ ಹಾಕಿದ್ದಾರೆ. ಹಾಗಾಗಿ ನಾವು ಏನೂ ಮಾತನಾಡುತ್ತಿಲ್ಲ ಎಂದು ಅನೌಪಚಾರಿಕವಾಗಿ ಹೇಳಿದರೂ ಈ ಕಲಾಪದಲ್ಲಿ ಅದು ಸತ್ಯ ಎನ್ನುವಂತೆ ಎದ್ದು ಕಾಣುತ್ತಿದೆ.

ಬಿಗ್ ಶಾಕ್: ವಿಧಾನಪರಿಷತ್​ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದು, ಮೇಲ್ಮನೆ ಮಾಜಿ ಸದಸ್ಯ ರಮೇಶ್ ಬಾಬು ರಾಜೀನಾಮೆ, ದಿನೇದಿನೆ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಬಿಜೆಪಿ ಪ್ರಭಾವಳಿ ಪ್ರಬಲವಾಗುತ್ತಿರುವುದು ಕೂಡ ಕುಮಾರಸ್ವಾಮಿ ರಾಜಕಾರಣದ ಮೇಲೆ ಪ್ರಭಾವ ಬೀರಿದೆ. ಕಲಾಪದಿಂದ ದೂರ ಉಳಿಯಲು ಇದೂ ಕಾರಣ ಎಂದು ರಾಜಕೀಯ ವಲಯದಲ್ಲಿ ಅರ್ಥೈಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net