

ಸುದ್ದಿಗೋಷ್ಠಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಬೆಳಗಾವಿ ಭಾಗದ ಜನರ ಬಹುದಿನಗಳಿಂದ ಬೇಡಿಕೆಯಾಗಿದ್ದ ಬೆಂಗಳೂರು-ಬೆಳಗಾವಿ ವಂದೇ ಭಾರತ ರೈಲು ಸಂಚಾರಕ್ಕೆ ಆ.10ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಮೆಟ್ರೋ ರೈಲು ಚಾಲನೆ ಕಾರ್ಯಕ್ರಮದಲ್ಲಿಯೇ ನರೇಂದ್ರ ಮೋದಿ ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಆ.10ರಂದು ಸಂಜೆ 6 ಗಂಟೆಗೆ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ ರೈಲು ಸ್ವಾಗತಕ್ಕೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗಾವಿಗರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ತ್ವರಿತವಾಗಿ ಯೋಜನೆ ಜಾರಿಗೊಳಿಸಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸದ್ಯ ಬೆಳಗಾವಿ-ಪುಣೆ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿರುವ ವಂದೇ ಭಾರತ ರೈಲು ವಾರದ ಎಂಟು ದಿನಗಳ ಕಾಲ ಓಡಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಮುಂದಿನ 6 ತಿಂಗಳಲ್ಲಿ ಬೆಳಗಾವಿ-ಕಿತ್ತೂರು-ಧಾರವಾಡನೇರ ರೈಲು ಯೋಜನೆ ಕಾಮಗಾರಿ ಆರಂಭಗೊಳ್ಳಲಿದೆ. ಜಿಲ್ಲೆಯ ಮೂರು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜಗೇರಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಮಾಜಿ ಸಂಸದೆ ಮಂಗಲ ಅಂಗಡಿ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕ ಅಧ್ಯಕ್ಷೆ ಗೀತಾ ಸುತಾರ ಇತರರಿದ್ದರು.