ಎಚ್.ಆರ್. ಚನ್ನಕೇಶ ಆಯ್ಕೆಯಲ್ಲಿ ಗೊಂದಲವಿಲ್ಲ, ಎಚ್ಡಿಕೆ ಹೇಳಿಕೆ

H.D.-KUMARASWAMY
ಗಂಗಾವತಿ ಜಯನಗರದ ಚನ್ನಕೇಶವ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಮಾತನಾಡಿದರು. ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್ ನಾಡಗೌಡ ಇತರರಿದ್ದರು.
Published on

ಗಂಗಾವತಿ: ಸ್ಥಳೀಯ ಮುಖಂಡರ ಒಪ್ಪಿಗೆಯಂತೆ ಗಂಗಾವತಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಎಚ್.ಆರ್. ಚನ್ನಕೇಶವರನ್ನು ಆಯ್ಕೆ ಮಾಡಿದ್ದು, ಯಾವುದೇ ಗೊಂದಲವಿಲ್ಲ ಎಂದು ಮಾಜಿ ಸಿಎಂ, ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ಜಯನಗರದ ಚನ್ನಕೇಶವ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಪಾಡಗುತ್ತಿ ಅಖ್ತರ್ ಸಾಬ್ ಸಮ್ಮತಿಯಂತೆ ಚನ್ನಕೇಶವರನ್ನು ಆಯ್ಕೆ ಮಾಡಿದ್ದು, ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ.

ಕರಡಿ ಸಂಗಣ್ಣ ಜೆಡಿಎಸ್ ಸೇರುವ ಬಗ್ಗೆ ಮಾಹಿತಿಯಿಲ್ಲ

ಸಂಸದ ಕರಡಿ ಸಂಗಣ್ಣ ಜೆಡಿಎಸ್ ಸೇರುವ ಬಗ್ಗೆ ಮಾಹಿತಿಯಿಲ್ಲ. ನನ್ನನ್ನು ಸಂಪರ್ಕಿಸಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವಷ್ಟು ಸಂಖ್ಯೆ ಬಲ ಬರಲಿದ್ದು, ಅಧಿಕಾರಕ್ಕಾಗಿ ಯಾವುದೇ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳಲ್ಲ. ಕನಕಗಿರಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಆಯ್ಕೆ ಮಾಡಿಲ್ಲ. ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನಂದಿನಿ ಮಿಲ್ಕ್ ವಿಚಾರದಲ್ಲಿ ಗುಜರಾತ್ ಹಸ್ತಕ್ಷೇಪ ಸರಿಯಲ್ಲ ಎಂದರು.

ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್ ನಾಡಗೌಡ, ಕೆಆರ್‌ಡಿಎಲ್ ಮಾಜಿ ನಿರ್ದೇಶಕ ಪಾಡಗುತ್ತಿ ಅಖ್ತರ್‌ಸಾಬ್, ಜೆಡಿಎಸ್ ಅಭ್ಯರ್ಥಿ ಎಚ್.ಆರ್. ಚನ್ನಕೇಶವ, ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ತಾಲೂಕಾಧ್ಯಕ್ಷ ಶೇಖ್ ನಬೀಸಾಬ್ ಇತರರಿದ್ದರು.

H.D.K.-CAR
ಗಂಗಾವತಿ ತಾಲೂಕು ಪ್ರವೇಶಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರನ್ನು ತಪಾಸಣೆ ನಡೆಸುತ್ತಿರುವ ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ಸೆಕ್ಟರ್ ಆಧಿಕಾರಿಗಳ ತಂಡ.

ಚುನಾವಣೆ ಕುರಿತಂತೆ ಆಂತರಿಕ ಸಭೆ

ಚುನಾವಣೆ ಕುರಿತಂತೆ ಜಿಲ್ಲೆ ಮತ್ತು ತಾಲೂಕು ಘಟಕದ ಮುಖಂಡರೊಂದಿಗೆ ಆಂತರಿಕ ಸಭೆ ನಡೆಸಿದರು. ಕಾರ್ಯಕರ್ತರು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ತಾಲೂಕು ಪ್ರವೇಶಿಸುತ್ತಿದ್ದಂತೆ ಚಿಕ್ಕಜಂತಕಲ್ ಚೆಕ್‌ಪೋಸ್ಟ್ ಬಳಿ ಕುಮಾರಸ್ವಾಮಿ ಅವರ ಕಾರನ್ನು ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ಸೆಕ್ಟರ್ ಅಧಿಕಾರಿಗಳ ತಂಡ ಪರಿಶೀಲಿಸಿತು.

ಪಾಡಗುತ್ತಿ ಅಖ್ತರ್‌ಸಾಬ್‌ಗೆ ಮತ್ತೆ ನಿರಾಶೆ….

2004ರಿಂದ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದ ಕೆಆರ್‌ಡಿಎಲ್ ಮಾಜಿ ನಿರ್ದೇಶಕ ಪಾಡಗುತ್ತಿ ಅಖ್ತರ್‌ಸಾಬ್ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, 2008, 2013 ಮತ್ತು 2018ರಲ್ಲಿ ಜೆಡಿಎಸ್ ಬಿಾರ್‌ಂಗಾಗಿ ಯತ್ನಿಸಿದ್ದರು. ಆದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಪಾಲಾಗಿತ್ತು.

ಈ ಬಾರಿಯಾದರೂ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಅಖ್ತರ್‌ಸಾಬ್‌ಗೆ ಮತ್ತೆ ನಿರಾಶೆಯಾಗಿದ್ದು, ಬಿಜೆಪಿಯಿಂದ ವಲಸೆ ಬಂದ ಎಚ್.ಆರ್. ಚನ್ನಕೇಶವ ಪಾಲಾಯಿತು. ಅಸಮಾಧಾನದಿಂದಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಗುರುತಿಸಿಕೊಂಡಿದ್ದು, ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net