

ಚಿಕ್ಕಮಗಳೂರು: ಕೈಯಲ್ಲಿ ಯಾವ ಅಸ್ತ್ರವೂ ಇಲ್ಲದೆ ಯದ್ಧಕ್ಕೆ ಹೊರಟಿದ್ದೇವೆ. ಯುದ್ಧ ಜಯಿಸೋದು ಹೇಗೆ? ನಮ್ಮ ಬಳಿ ಮದ್ದುಗುಂಡು, ಶಸ್ತ್ರಾಸ್ತ್ರ ಇಲ್ಲ. ಎದುರಾಳಿ ಶಸ್ತ್ರಸಜ್ಜಿತರಾಗಿ ಯುದ್ದಭೂಮಿಗೆ ಇಳಿದಿದ್ದಾರೆ.
ಇದು ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮುಖಂಡರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಡಿದ ಬೇಸರದ ಮಾತುಗಳು.
6 ತಿಂಗಳ ಮುನ್ನವೇ ಅಭ್ಯರ್ಥಿಗಳನ್ನು ಘೊಷಿಸಿದ್ದರೆ ಇಷ್ಟರೊಳಗೆ ಕಾರ್ಯಕರ್ತರನ್ನು ಹುರಿದುಂಬಿಸಬಹುದಿತ್ತು. ಚುನಾವಣೆ ಬಗ್ಗೆ ಅಸಡ್ಡೆ ತೋರಬಾರದು ನಿಜ. ಆದರೆ ಮಲೆನಾಡಲ್ಲಿ ಚುನಾವಣೆ ಅಸಾಧ್ಯದ ಮಾತು. ಕೊಯ್ಲುಗಳು ಆರಂಭವಾಗಿದೆ. ಇದು ಕಾರ್ಯಕರ್ತರ ಚುನಾವಣೆ, ಹೇಗೆ ಮಾಡೋದು? ಅಸಮಾಧಾನ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ ತೂಗುಕತ್ತಿ ತಲೆಮೇಲೆ ನಿಂತಿದೆ. ಖಾಂಡ್ಯ ಹೋಬಳಿಯಲ್ಲಿ ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಅಳವಡಿಸಿ ಸಂಘಟನಾತ್ಮಕ ಹೋರಾಟ ಆರಂಭಿಸಿದ್ದಾರೆ. ಜನರನ್ನು ಮನವರಿಕೆ ಮಾಡೋದು ಹೇಗೆ? ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಅರ್ಧಭಾಗ ಹೋಗುತ್ತದೆ ಎಂದರು.
ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ ಜೆಡಿಎಸ್ ಅಧಿಕಾರ ಬಂದ ಸಂದರ್ಭ ಸ್ಥಳೀಯ ನಾಯಕರು ಜಿಲ್ಲೆಗೆ ಕೆಲಸ ಮಾಡಿದ್ದಾರೆ ನಿಜ. ಆದರೆ ರಾಜ್ಯ ಮಟ್ಟದಲ್ಲಿ ಇಲ್ಲಿನ ಕಾರ್ಯಕರ್ತರು, ಮುಖಂಡರಿಗೆ ಯಾವುದೆ ಕೆಲಸವಾಗಲಿಲ್ಲ. ಹಾಗಾಗಿ ವರಿಷ್ಠ ಮಂಡಳಿ ಬಗ್ಗೆ ನಾನು ಸೇರಿದಂತೆ ಬಹಳಷ್ಟು ಕಾರ್ಯಕರ್ತರಿಗೆ ಬೇಸರವಿದ್ದು ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.
ಪಕ್ಷದ ಮುಖಂಡ ಎಸ್.ಎಲ್.ಧಮೇಗೌಡ ಮಾತನಾಡಿ, ಗ್ರಾಪಂ ಚುನಾವಣೆಗೆ ಮುಖಂಡರು, ಕಾರ್ಯಕರ್ತರು ಸನ್ನದ್ಧರಾಗಿ ಆಯಾ ಭಾಗದಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಬೇಕು. ಆಯಾ ಕ್ಷೇತ್ರದಲ್ಲಿ ಮುಖಂಡರು ಜವಾಬ್ದಾರಿ ಹೊತ್ತು ಬಿಜೆಪಿ, ಕಾಂಗ್ರೆಸ್ ಅನ್ನು ಎದುರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಗ್ರಾಪಂ ಚುನಾವಣೆ ಅನಿರೀಕ್ಷಿತವಲ್ಲ. ಚುನಾವಣೆ ಯಾವರೀತಿ ಎದುರಿಸಬೇಕೆಂದು ಸಭೆಯಲ್ಲಿ ಪ್ರಸ್ತಾಪವಾಗಿರುವುದು ಸುಳ್ಳಲ್ಲ. ಸತ್ಯ ಎಂದಿಗೂ ಕಹಿಯಾಗಿರುತ್ತದೆ. ಸಂಘಟನೆಯಲ್ಲಿ ಎಲ್ಲ ರೀತಿ ವ್ಯವಸ್ಥೆ ಇದ್ದರೂ ಕುಂಠಿತವಾಗಲು ಕಾರ್ಯಕರ್ತರನ್ನು ದೂರುವಂಥದ್ದಲ್ಲ. ನಾನು ಸೇರಿ ಮುಖಂಡರೇ ಹೊಣೆ ಹೋರಬೇಕಾಗುತ್ತದೆ. ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಕೆಲಸ ಮಾಡದಿದ್ದರಿಂದ ಈ ಪರಿಸ್ಥಿತಿ ಬಂದಿದೆ ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣೆ ಮಾಡಲು ಸದಾ ಸಿದ್ಧವಾಗಿರುತ್ತವೆ. ಜೆಡಿಎಸ್ ಕೂಡ ಹೊರತಲ್ಲ. ಆದರೆ ಮಲೆನಾಡು ಭಾಗದಲ್ಲಿ ಕಾಫಿ, ಗದ್ದೆಕೊಯ್ಲಿನ ಸಂದರ್ಭ ಚುನಾವಣೆ ಘೊಷಣೆ ಆಗಿರುವುದು ಪಕ್ಷಕ್ಕೆ ಸವಾಲೊಡ್ಡಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್, ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್, ಮಾಜಿ ಅಧ್ಯಕ್ಷ ಮಂಜಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಬಾಲಕೃಷ್ಣೇಗೌಡ, ಎಂ.ಡಿ.ರಮೇಶ್, ನಗರಾಧ್ಯಕ್ಷ ಜಯರಾಜ್ ಅರಸ್, ಮಾನು ಮಿರಾಂಡ, ಲಕ್ಷ್ಮಣ್, ಯುವ ಘಟಕದ ಅಧ್ಯಕ್ಷ ವಿನಯ್ರಾಜ್, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಇತರರಿದ್ದರು.