

ವಿಜಯವಾಣಿ ಸುದ್ದಿಜಾಲ ಗದಗ
ಗ್ಯಾರಂಟಿ ಯೋಜನೆಗಳಿಂದ ಅಧಿಕಾರಿಕ್ಕೆ ಬಂದಿದ್ದ ಕಾಂಗ್ರೆಸ್ ಈಗ ಗ್ಯಾರಂಟಿ ಮರೆತಂತೆ ಕಾಣುತ್ತಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಾಂಪುರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎನ್ಡಿಎ ಮೈತ್ರಿಕೂಟಕ್ಕೆ ಜನರು ಬೆಂಬಲ ಸೂಚಿಸುತ್ತಿದ್ದಾರೆ. ಹಾಗಾಗಿ ವಿಚಲಿತರಾಗಿರುವ ಕಾಂಗ್ರೆಸ್ ಗ್ಯಾರಂಟಿ ಮರೆತು ಚೊಂಬಿಗೆ ಬಂದಿದೆ ಎಂದು ಆರೋಪಿಸಿದರು. ಚುನಾವಣೆಗಳಲ್ಲೇ ಮೊದಲ ಬಾರಿಗೆ ಹಳ್ಳಿ ಹಳ್ಳಿಗಳಲ್ಲಿ ರಾಷ್ಟ್ರೀಯತೆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಈ ಬಾರಿ ಅತೀ ಹೆಚ್ಚು ಮತಗಳು ಬಿಜೆಪಿಗೆ ಲಭಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪಧಿರ್ಸಲು ಅಭ್ಯಥಿರ್ಗಳೇ ಸಿಗಲಿಲ್ಲ. ತಮ್ಮ ಸಚಿವ ಸ್ಥಾನ ಗಟ್ಟಿಗೊಳಿಸಲು ತಮ್ಮ ಮಕ್ಕಳನ್ನೆ ಅಭ್ಯಥಿರ್ಯನ್ನಾಗಿ ನಿಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ವಿಧಾನ ಸಭೆ ಚುನಾವಣೆಯಲ್ಲಿ ಕುರುಬ ಸಮಾಜ ಕಾಂಗ್ರೆಸ್ ಬೆಂಬಲಿಸಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು. ದೇಶದ ಅಭಿವೃದ್ಧಿಗೆ ಕುರುಬರು ಮತ ಚಲಾಯಿಸಬೇಕು ಎಂದು ಕುರುಬ ಸಮುದಾಯಕ್ಕೆ ಮನವಿ ಮಾಡಿದರು.
ದುಡುಕಿನ ನಿರ್ಧಾರ:
ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕುರಿತು ಮಾತನಾಡಿದ ಬಂಡೆಪ್ಪ, ಈಶ್ವರಪ್ಪ ಅವರು ಬಿಜೆಪಿ ಅವಧಿಯಲ್ಲಿ ಎಲ್ಲ ರಾಜಕೀಯ ಸ್ಥಾನವನ್ನು ಅಲಂಕರಿಸಿದ್ದಾರೆ. ಎಲ್ಲ ಅವಕಾಶಗಳನ್ನು ಬಿಜೆಪಿ ನೀಡಿದೆ. ಅದನ್ನೆಲ್ಲ ಮರೆತು ಬಂಡಾಯ ಅಭ್ಯಥಿರ್ ಆಗಬಾರದಿತ್ತು ಎಂದರು.