ಕೈ-ಕಮಲಕ್ಕೆ ಜೆಡಿಎಸ್ ಜ್ವರ : ಮಾಜಿ ಸಿಎಂ ಎಚ್ಡಿಕೆ ಆಕ್ರೋಶ : ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ

25_SDL_HDK
Published on

ಶಿಡ್ಲಘಟ್ಟ: ಯಾವುದೆ ಚುನಾವಣೆ ಬಂದರೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ಬಗ್ಗೆ ಜ್ವರ ಶುರುವಾಗುತ್ತದೆ ಎಂದು ಲೇವಡಿ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಒಳ ಒಪ್ಪಂದ ನಡೆದಿದೆ ಎನ್ನವ ಮೂಲಕ ಗೊಂದಲ ಮೂಡಿಸುತ್ತಾರೆ, ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಾರೆ ಎಂದು ಹರಿಹಾಯ್ದಿದ್ದಾರೆ.

ತಾಲೂಕಿನ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಅವರ ಪುತ್ರಿ ಇತ್ತೀಚೆಗೆ ನಿಧನರಾಗಿದ್ದು ಸಾಂತ್ವನ ಹೇಳಲು ಗುರುವಾರ ಎಚ್‌ಡಿಕೆ ಸೌಹಾದರ್ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದವನ್ನು ಮಾಡಿಕೊಳ್ಳುತ್ತವೆ. ಆದರೆ ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡಿ ಕಾರ‌್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಅತಿವೃಷ್ಟಿಯ ವೀಕ್ಷಣೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ಬೆಳೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದರು.

ಬಿಜೆಪಿಯ ಸಾಕಷ್ಟು ಮಂತ್ರಿಗಳಿಗೆ ಜನರ ಕಷ್ಟಗಳನ್ನು ಅರಿಯಲು ಪುರುಸೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಸಾಮಾನ್ಯರೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಶ್ರೀನಿವಾಸಪುರ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ವಕ್ಕಲೇರಿ ರಾಮು, ಮುಖಂಡರಾದ ಬಂಕ್ ಮುನಿಯಪ್ಪ, ಬಿ.ಎನ್.ಸಚಿನ್ ಇತರರಿದ್ದರು.

ತಪ್ಪಾಗಿ ಗ್ರಹಿಸಿದ್ದೆ....

ರವಿಕುಮಾರ್ ಮನೆ ಬಳಿ ಜಮಾಯಿಸಿದ್ದ ಸಾವಿರಾರು ಕಾರ‌್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ ನಾನು ಬಿ.ಎನ್.ರವಿಕುಮಾರ್ ಅವರ ಬಗ್ಗೆ ತಪ್ಪಾಗಿ ಗ್ರಹಿಸಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಶಕ್ತಿ ಹಾಗೂ ಕಾರ‌್ಯಕರ್ತರ ನಡುವಿನ ಬಾಂಧವ್ಯದ ಬಗ್ಗೆ ತಿಳಿದುಕೊಂಡೆ. ಮಗಳ ಸಾವಿನ ನೋವಿನಲ್ಲಿ ಮನೆಯಲ್ಲಿ ಕೂರದೆ ಕಾರ‌್ಯಕರ್ತರ ಕಷ್ಟ ಸುಖಗಳಲ್ಲಿ ಭಾಗವಹಿಸುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net