ಯದುವೀರ್ ಗೆಲುವಿಗೆ ಜೆಡಿಎಸ್ ಶ್ರಮ

Published on

ಸೋಮವಾರಪೇಟೆ: ವರಿಷ್ಠರ ತೀರ್ಮಾನದಂತೆ ಕೊಡಗಿನಲ್ಲಿಯೂ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಮಂದಣ್ಣ ತಿಳಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ನಮ್ಮ ಪಕ್ಷದ ವರಿಷ್ಠರಾದ ಕುಮಾರಸ್ವಾಮಿ ಅವರೂ ಈ ಬಾರಿ ಎನ್‌ಡಿಎ ಒಕ್ಕೂಟದಿಂದ ಸ್ಪರ್ಧಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನಮಾನ ಲಭಿಸುವ ನಿರೀಕ್ಷೆಯಿದೆ ಎಂದು ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಹೇಳಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದಾಗ ನೂರಾರು ಕೋಟಿ ರೂ. ಅನುದಾನ ನೀಡಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಹಾಗೆಯೇ ರೈತರ 1 ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ನಾಯಕರ ಗೆಲುವಿಗೆ ಬಿಜೆಪಿಯವರೂ ಶ್ರಮಿಸುತ್ತಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿಯೂ ಜೆಡಿಎಸ್ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

ದೇವೇಗೌಡ ಹಾಗೂ ಕುಮಾರಸ್ವಾಮಿ ರೈತಪರ ಕಾಳಜಿಯಳ್ಳ ನಾಯಕರಾಗಿದ್ದಾರೆ. ರೇವಣ್ಣ ಅವರು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ 60 ಸಾವಿರಕ್ಕೂ ಅಧಿಕ ಜೆಡಿಎಸ್ ಮತಗಳಿದ್ದು, ಈ ಬಾರಿ ಬಿಜೆಪಿಯ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net