ಬಿ.ವೈ.ರಾಘವೇಂದ್ರ ಪರ ಜೆಡಿಎಸ್ ಮನೆ ಮನೆ ಪ್ರಚಾರ

15 SMG - BYR(2) MAST HEAD PHOTO
Published on

ಶಿಕಾರಿಪುರ: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಜಿಲ್ಲೆಯಲ್ಲಿ ನಾವು ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಜೆಡಿಎಸ್ ರಾಜ್ಯ ಒಬಿಸಿ ಘಟಕದ ಉಪಾಧ್ಯಕ್ಷ ಸಂತೋಷ್ ಹೇಳಿದರು.

ದೇಶದ ಹಿತ ಹಾಗೂ ಭದ್ರತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಬೆಂಬಲಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದು, ಅದರಂತೆ ನಾವು ಮೈತ್ರಿ ಅಭ್ಯರ್ಥಿ ರಾಘವೇಂದ್ರ ಗೆಲುವಿಗಾಗಿ ಶ್ರಮಿಸುತ್ತೇವೆ. ಜೆಡಿಎಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ 9 ಲಕ್ಷಕ್ಕೂ ಅಧಿಕ ಒಬಿಸಿ ಮತದಾರರಿದ್ದಾರೆ. ರಾಘವೇಂದ್ರ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಜನರು ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಕನಿಷ್ಠ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೈಗೊಂಡ ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳನ್ನು ನಾಡಿನ ಜನತೆ ಇನ್ನೂ ಮರೆತಿಲ್ಲ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಯೋಗೇಶ್ ಬೆಂಕಿ ಮಾತನಾಡಿ, ಬಿ.ವೈ.ರಾಘವೇಂದ್ರ ಅವರನ್ನು ಜಿಲ್ಲೆಯ ಜನರು ಈ ಬಾರಿ ಕೇವಲ ಸಂಸದರನ್ನಾಗಿ ಆಯ್ಕೆ ಮಾಡುತ್ತಿಲ್ಲ, ಬದಲಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರನ್ನಾಗಿಸಲು ಮತ ಚಲಾವಣೆ ಮಾಡುತ್ತಿದ್ದೇವೆ. ತಾಲೂಕಿನಲ್ಲಿ ಅತ್ಯಧಿಕ ಮತಗಳನ್ನು ರಾಘವೇಂದ್ರ ಪಡೆಯಲಿದ್ದು, ಅವರ ಗೆಲುವು ನಿಶ್ಚಿತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net