ಜೆಡಿಎಸ್ ಜಿಲ್ಲಾಧ್ಯಕ್ಷಗೆ ಡಿಕೆಶಿ ಗಾಳ

7 smg 7
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಂ.ಶ್ರೀಕಾಂತ್ ಹೆಗಲ ಮಲೆ ಕೈ ಹಾಕಿರುವ ಫೋಟೋ ವೈರಲ್ ಆಗಿದೆ.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಆಪರೇಷನ್ ಹಸ್ತ ಮತ್ತೆ ಸದ್ದು ಮಾಡಿದೆ. ಈ ಬಾರಿ ಜೆಡಿಎಸ್ ಜಿಲ್ಲಾಧ್ಯಕ್ಷರಿಗೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ತೆನೆಯಿಳಿಸಿ ಕೈ ಹಿಡಿಯುವುದು ನಿಶ್ಚಿತವಾಗಿದೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಎಂ.ಶ್ರೀಕಾಂತ್ ಅವರು ಬಿಬಿಎಂಪಿ ಟಿಕೆಟ್ ಭರವಸೆಯೊಂದಿಗೆ ಕಾಂಗ್ರೆಸ್ ಸೇರಲು ಸಹಮತ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಜೆಡಿಎಸ್ ಜಿಲ್ಲಾ ಘಟಕದ ಬಹುತೇಕ ಮಂದಿಯೂ ಕಾಂಗ್ರೆಸ್‌ನತ್ತ ಹೋಗುವುದು ನಿಶ್ಚಿತ. ಹೀಗಾಗಿ ಜೆಡಿಎಸ್‌ಗೆ ಮತ್ತೊಂದು ಆಘಾತ ಎದುರಾಗಿದೆ.
ಈ ಹಿಂದೆ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಆರ್.ಎಂ.ಮಂಜುನಾಥ ಗೌಡ, ಜೆಡಿಎಸ್‌ನಿಂದ ಎರಡು ವಿಧಾನಸಭೆ ಚುನಾವಣೆ ಎದುರಿಸಿದ್ದ ಮಧು ಬಂಗಾರಪ್ಪ, ಐದು ತಿಂಗಳ ಹಿಂದಷ್ಟೇ ಬಿಜೆಪಿ ತೊರೆದು ಜೆಡಿಎಸ್ ಟಿಕೆಟ್‌ನಿಂದ ವಿಧಾನಸಭೆಗೆ ಸ್ಪರ್ಧಿಸಿ ಫಲಿತಾಂಶ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾದ ಆಯನೂರು ಮಂಜುನಾಥ್ ಹೀಗೆ ಸಾಲು ಸಾಲು ನಾಯಕರು ಪಕ್ಷ ತೊರೆದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಜೆಡಿಎಸ್‌ಗೆ ಆಧಾರವಾಗಿ ನಿಂತಿದ್ದ ಎಂ.ಶ್ರೀಕಾಂತ್ ಪಕ್ಷ ತೊರೆಯುವ ತೀರ್ಮಾನ ಮಾಡಿರುವುದು ಜೆಡಿಎಸ್ ವರಿಷ್ಠರಿಗೆ ಆಶ್ಚರ್ಯ ಮೂಡಿಸಿರಲಿಕ್ಕೂ ಸಾಕು.
ಎಂ.ಶ್ರೀಕಾಂತ್ ಜೆಡಿಎಸ್ ತೊರೆಯುತ್ತಾರೆ ಎಂಬ ವದಂತಿ ಹಲವು ತಿಂಗಳಿನಿಂದಲೂ ಕೇಳಿ ಬರುತ್ತಿತ್ತು. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲೇ ಶ್ರೀಕಾಂತ್ ಕೂಡಾ ಕಾಂಗ್ರೆಸ್‌ಗೆ ಹೋಗುತ್ತಾರೆಂಬ ಚರ್ಚೆಗಳು ಕೇಳಿ ಬಂದಿದ್ದವು. ಆದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆತ್ಮೀಯತೆ ಶ್ರೀಕಾಂತ್ ಅವರನ್ನು ಕಟ್ಟಿಹಾಕಿತ್ತು.
ಇದೀಗ ರಾಜಕೀಯ ಭವಿಷ್ಯವನ್ನು ಅರಸಿಕೊಂಡು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರೊಂದಿಗೆ ಜೆಡಿಎಸ್‌ನಿಂದ ಎಷ್ಟು ಮಂದಿ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬುದರ ಮೇಲೆ ಮುಂಬರುವ ಶಿವಮೊಗ್ಗ ನಗರ ಪಾಲಿಕೆ ಚುನಾವಣೆ, ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪರಿಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಲೆಕ್ಕಾಚಾರ ಸಿಗಲಿದೆ.
ಮತ್ತೆ ಬಿಬಿಎಂಪಿಯತ್ತ:
ಜೆಡಿಎಸ್‌ನಿಂದ 2008 ಹಾಗೂ 2013ರಲ್ಲಿ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಶ್ರೀಕಾಂತ್, 2018ರ ಚುನಾವಣೆಯಲ್ಲಿ ಎಚ್.ಎನ್.ನಿರಂಜನ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. 2008ರಲ್ಲಿ ಮೂರನೇ ಸ್ಥಾನ ಪಡೆದಿದ್ದ ಶ್ರೀಕಾಂತ್ 19,232 ಮತಗಳನ್ನು ಗಳಿಸಿದರೆ, 2013ರಲ್ಲಿ 21,638 ಮತಗಳನ್ನು ಪಡೆದಿದ್ದರು. ಇದರ ನಡುವೆ ಒಮ್ಮೆ ಬಿಬಿಎಂಪಿ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆ ನಡೆಸಿದ್ದ ಎಂ.ಶ್ರೀಕಾಂತ್, ಈಗ ಕಾಂಗ್ರೆಸ್ ಟಿಕೆಟ್‌ನಿಂದ ಮತ್ತೊಮ್ಮೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತವಾಗಿದೆ.
ಗೌಡರ ಕುಂಟುಂಬದ ನಂಬಿಕಸ್ತ:
ಎಂ.ಶ್ರೀಕಾಂತ್, ಗೌಡರ ಕುಟುಂಬದ ನಂಬಿಕೆಯ ಬಂಟನಾಗಿದ್ದವರು. ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಆದೇಶವನ್ನು ಎಂದೂ ಉಪೇಕ್ಷಿಸಿದವರಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸು ಎಂದಾಗ ಕಣಕ್ಕಿಳಿದಿದ್ದಾರೆ. ಬೇಡ ಎಂದಾಗ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಸಾರಥಿಯೇ ಇಲ್ಲದ ಕಷ್ಟದ ದಿನಗಳಲ್ಲಿ ಪಕ್ಷಕ್ಕೆ ಹೆಗಲು ನೀಡಿದ್ದರು, ಗೌಡರ ಕುಟುಂಬ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಕುರ್ಚಿ ಬಿಟ್ಟುಕೊಟ್ಟಿದ್ದರು. ಜೆಡಿಎಸ್ ಸೇರಿದ ಅನೇಕರು ಅಧಿಕಾರಕ್ಕಾಗಿ ಬೇರೆ ಪಕ್ಷಗಳತ್ತ ಮುಖ ಮಾಡಿದಾಗಲೂ ಶ್ರೀಕಾಂತ್ ಮಾತ್ರ ಕುಮಾರಣ್ಣನ ನೆರಳಿನಂತೆ ನಿಂತಿದ್ದರು. ಈಗ ರಾಜಕೀಯ ಚಿತ್ರಣ ಬದಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net