ಜೆಡಿಎಸ್ ಪುನಶ್ಚೇತನ ಕಾರ್ಯಕ್ರಮ

JDS DEVEGOUDA ELECTION KOPPLA PM MODI
ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಶಕ್ತಿ ಪ್ರದರ್ಶನ ಮಾಡಿದರು. ಶಾಸಕರಾದ ಜಿ.ಟಿ.ದೇವೇಗೌಡ, ಕರಿಯಮ್ಮ, ನೇಮಿರಾಜ ನಾಯ್ಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೊಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಚ್.ಕೆ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು ಇತರರಿದ್ದರು.
Published on

ಕ್ಪೊಪಳ: ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ ಪ್ರಧಾನಿ ಆಗುವುದು ಸತ್ಯ. ಅದರಂತೆ ಕಾಂಗ್ರೆಸ್ ಧೂಳಿಪಟವಾಗುವುದು ಅಷ್ಟೇ ಸತ್ಯ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಭವಿಷ್ಯ ನುಡಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಜೆಪಿ-ಜೆಡಿಎಸ್ ಕಾರಣ. ನಮ್ಮವರನ್ನೇ ನಾವು ಸೋಲಿಸಿದ ಪರಿಣಾಮ ಇದು. ಕಾಂಗ್ರೆಸ್ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ.

ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಅಭಿವೃದ್ಧಿ ಕಾಣುತ್ತಿಲ್ಲ. ಬಡವರಿಗೆ ಉಚಿತ ವಿದ್ಯುತ್ ನೀಡುವುದಾಗಿ ಯಾಮಾರಿಸಿದ್ದಾರೆ. ರೈತರ ಪಂಪ್‌ಸೆಟ್ ವಿದ್ಯುತ್ ಕಿತ್ತುಕೊಂಡಿದ್ದಾರೆ.

ವಿದ್ಯುತ್ ಉತ್ಪಾದನೆಗೆ ಹಣ ತೆಗೆದಿರಿಸಿಲ್ಲ. ಹಿಂದಿನ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಗೆ ಪೂರಕವಾಗಿ ನೀಡುತ್ತಿದ್ದ 4 ಸಾವಿರ ರೂ. ನಿಲ್ಲಿಸಿದ್ದಾರೆ. ಗುತ್ತಿಗೆದಾರರು ಕೆಲಸ, ಬಿಲ್ ಇಲ್ಲದೇ ಮನೆ ಸೇರಿದ್ದಾರೆ.

ಕಾಯಕವೇ ಕೈಲಾಸ ಎಂದ ಬಸವಣ್ಣನ ನಾಡಿನ ಜನರು ಸಿದ್ದರಾಮಯ್ಯ ಪುಕ್ಕಟ್ಟೆ ಭಾಗ್ಯ ಒಪ್ಪಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಬಲ ಕುಂದಿಲ್ಲ. ಮೂವರು ಶಾಸಕರಾಗಿದ್ದಾರೆ ಎಂದರು.

ಶಾಸಕ ನೇಮಿರಾಜ ನಾಯ್ಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೊಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಚ್.ಕೆ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ಜೆಡಿಎಸ್ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಯಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಮುಖಂಡರು ಮತ್ತು ಕಾರ್ಯಕರ್ತರು ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದರು.

ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ದೊಡ್ಡಪ್ಪಗೌಡ ಪಾಟೀಲ್, ವೀರಭದ್ರಪ್ಪ ಹಾಲರವಿ, ಪ್ರಸನ್ನಕುಮಾರ, ತಿಮ್ಮರಾಯಪ್ಪ, ವೀರಭದ್ರಪ್ಪ, ರಾಜುಗೌಡ್ರು, ದೊಡ್ಡನಗೌಡ್ರು, ಸುನೀತಾ ಚೌವ್ಹಾಣ್, ಸುರೇಶಗೌಡ,

ಕೃಷ್ಣ ರೆಡ್ಡಿ, ಸುರೇಶ, ಸಿದ್ದು ಬಂಡಿ, ದೊಡ್ಡನಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಮಲ್ಲನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net