

ಮಂಡ್ಯ: ಶ್ರೀರಂಗಪಟ್ಟಣ ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರನ್ನು ಟೀಕಿಸುವ ಹುಮ್ಮಸಿನಲ್ಲಿ ಪ್ರತಿಷ್ಠಿತ ಚುಂಚೇಗೌಡ ಕುಟುಂಬದ ಅದರಲ್ಲಿಯೂ ಹೆಣ್ಣಿನ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಮದ್ದೂರು ಶಾಸಕ ಕೆ.ಎಂ.ಉದಯ್ ಇದೀಗ ಜೆಡಿಎಸ್ ಸೇರಿದಂತೆ ಚುಂಚೇಗೌಡ ಕುಟುಂಬದ ಹಿತೈಷಿಗಳ ಕೆಂಗ್ಗಣಿಗೆ ಗುರಿಯಾಗಿದ್ದಾರೆ.
ಈ ಕುರಿತು ಶನಿವಾರ ಜೆಡಿಎಸ್ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಉದಯ್ ಹೇಳಿಕೆ ಕುರಿತು ಟೀಕಾ ಪ್ರಹಾರ ನಡೆಸಿದರು. ಮಾತ್ರವಲ್ಲದೆ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್ ವರಿಷ್ಠರೇ ಹೊಣೆಯಾಗಬೇಕಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮಂಡ್ಯ ಜಿಲ್ಲೆಗೆ ಮತ್ತು ರಾಜಕಾರಣಕ್ಕೆ ಅದರದ್ದೇ ಆದ ಗೌರವವಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರಿಂದಲೂ ಆಗಬಾರದು. ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಶಾಸಕ ಉದಯ್ ಅವರು 3ನೇ ದರ್ಜೆ ವ್ಯಕ್ತಿಗಳಂತೆ ಆಡಿರುವ ಮಾತುಗಳು ಸರಿಯಲ್ಲ. ಉದಯ್ ಅವರು ಅಕ್ಕ-ತಂಗಿಯರೊಂದಿಗೆ ಜನ್ಮ ತಾಳಿಲ್ಲವೇ?. ರಾಜಕಾರಣ ಮಾಡುತ್ತೇವೆಂಬ ಕಾರಣಕ್ಕೆ ಹೆಂಡತಿ ಮತ್ತು ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಲಾಗುತ್ತದೆಯೇ?. ಮದ್ದೂರು ಶಾಸಕನೇ ಮೊದಲು ಗಂಡಸ್ತನ ಪದ ಬಳಸಿ ಟೀಕೆ ಮಾಡಲಾರಂಭಿಸಿದ್ದರು. ಕಾಂಗ್ರೆಸ್ ವರಿಷ್ಠರು ಆತನನ್ನು ಹದ್ದುಬಸ್ತಿನಲ್ಲಿಡಬೇಕು ಎಂದರು.
ಉದಯ್ ಮಾತುಗಳಿಗೆ ಒಂದು ರೀತಿ ನಾವೇ ದಿಗ್ಬಮೆಗೊಂಡಿದ್ದೇವೆ. ಜನಪ್ರತಿನಿಧಿಗಳು ತಲೆತಗ್ಗಿಸುವ ಮಟ್ಟಿಗೆ ನಾಲಗೆ ಹರಿಯಬಿಟ್ಟಿದ್ದಾರೆ. ಸೂರ್ಯನನ್ನು ನೋಡಿ ಆಗಸಕ್ಕೆ ಉಗುಳಿದರೆ ಅದು ನಮ್ಮ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ಉದಯ್ ಅರಿಯಬೇಕು. ರವೀಂದ್ರ ಶ್ರೀಕಂಠಯ್ಯ ಅವರ ತಾತ ಚುಂಚೇಗೌಡ ಅವರ ಕುಟುಂಬ ದಾನಧರ್ಮ ಮಾಡಿಕೊಂಡು ಬಂದ ಮನೆತನ. ಅವರ ಜನಸೇವೆಯನ್ನು ಮೆಚ್ಚಿಸಿ ಸ್ವತಃ ಮೈಸೂರು ಮಹಾರಾಜರೇ ಶ್ಲಾಘಿಸಿ, ಅವರ ಮನೆಗೆ ಬಂದು ಊಟ ಮಾಡಿಹೋಗಿದ್ದಾರೆ. ಇಂತಹ ಕುಟುಂಬದ ಬಗ್ಗೆ ಕೀಳು ಭಾಷೆ ಬಳಸಿ ಮಾತನಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ತಾತನ ಕಾಲದಿಂದಲೂ ನೂರಾರು ಎಕರೆ ಹೊಂದಿರುವ ಜಮೀನ್ದಾರರು. ಜನರ ಕಷ್ಟಸುಖಗಳಿಗೆ ಸ್ಪಂದಿಸಿದ, ಆರ್ಥಿಕವಾಗಿ ನೆರವು ನೀಡಿದ ಕುಟುಂಬ. ಅವರ ಬಗ್ಗೆಯೂ ಕೀಳಾಗಿ ಮಾತನಾಡಿರುವುದು ಶಾಸಕ ಉದಯ್ ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ. ಜತೆಗೆ, ಜಿಲ್ಲೆಯ ಗೌರವವನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗುವುದು ಹಾಗೂ ಗೌರವಯುತವಾಗಿ ಚುನಾವಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಇನ್ನು ಮಳವಳ್ಳಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ನನ್ನನ್ನು ದೊಡ್ಡರಾಜು ಎಂದು ಮೂದಲಿಸಿ ಕರೆದಿದ್ದಾರೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರೇ ನನ್ನನ್ನು ದೊಡ್ಡರಾಜು ಎಂದು ಕರೆದಿದ್ದಾರೆ. ಎಚ್.ಡಿ.ದೇವೇಗೌಡರು ನನಗೆ ರಾಜಕೀಯ ಶಕ್ತಿ ಕೊಟ್ಟವರು. ದೇವರಂತೆ ಆಶೀರ್ವಾದ ಮಾಡಿದವರು ಚುಂಚಶ್ರೀಗಳು. ಕಳಂಕರಹಿತ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ನೀವೇನು ನನ್ನನ್ನು ಟೀಕಿಸುವುದು?. ನನ್ನನ್ನು ಟೀಕಿಸುವ, ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎಂದು ಕಿಡಿಕಾರಿದ ಸಿಎಸ್‌ಪಿ, ದೇವೇಗೌಡರು ನರೇಂದ್ರಸ್ವಾಮಿ ಶಾಸಕತ್ವ ಉಳಿಸಿಕೊಟ್ಟಿದ್ದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ನೀವು ಕರೆದ ಸ್ಥಳಕ್ಕೆ ಬರುತ್ತೇವೆ. ಬನ್ನಿ ಚರ್ಚೆ ಮಾಡೋಣ. ಎಲ್ಲ ಅಧಿಕಾರವನ್ನೂ ನೀವೇ ಅನುಭವಿಸಬೇಕೆ?. ಇತರ ಜಾತಿಯವರಿಗೆ ಅವಕಾಶ ಬೇಡವೇ?. ಎಂಡಿಸಿಸಿ ಬ್ಯಾಂಕ್ ವರಿಷ್ಠರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಿ.ಎಸ್.ಯಡಿಯೂರಪ್ಪ ಅವರ ಮನೆ ಬಾಗಿಲನ್ನು ಕಾದಿಲ್ಲವೇ ಎಂದು ಟೀಕಾ ಪ್ರಹಾರ ನಡೆಸಿದರು.
ಅಮರಾವತಿ ಚಂದ್ರಶೇಖರ್ ಮತ್ತವರ ಸಹೋದರರು 2019ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ಕುಮಾರಸ್ವಾಮಿ ಪರವಾಗಿ ಚುನಾವಣೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಾವು ಮಾತುಕೊಟ್ಟಂತೆ ಅವರ ಸಹೋದರ ಅಶ್ವಥ್ ಅವರನ್ನು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಮಾಡಿದೆವು. ಆದರೆ, ನೀವು ನಿಮ್ಮ ಪಕ್ಷದವರೇ ಆದ, ಜಿಲ್ಲೆಯಲ್ಲಿ ಕಿತ್ತೂರುರಾಣಿ ಚೆನ್ನಮ್ಮಂತಿರುವ ಮಾಜಿ ಶಾಸಕ ಮಲ್ಲಾಜಮ್ಮ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ ನಮಗೆ ಗೊತ್ತಿಲ್ಲವೇ ಎಂದು ತಿರುಗೇಟು ನೀಡಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ನವೀನ್‌ಕುಮಾರ್ ಹಾಜರಿದ್ದರು
ಮನೆಗಲ್ಲ, ರಸ್ತೆಗೆ ಬನ್ನಿ ನೋಡೋಣ
ನಾಗಮಂಗಲ ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಮದ್ದೂರು ಮಹಾತ್ಮಗಾಂಧೀಜಿ ಅವರು ಹೆಜ್ಜೆ ಇಟ್ಟ ಪುಣ್ಯಭೂಮಿ. ಅಂತಹ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಾಸಕ ಉದಯ್ ಅಧಿಕಾರ, ಹಣದ ಮದದಲ್ಲಿ ಹೆಣ್ಣಿನ ಬಗ್ಗೆ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ನಾವು ಬಳಕೆ ಮಾಡುವ ಶಬ್ದಗಳ ಅರ್ಥವನ್ನು ತಿಳಿದು ಮಾತನಾಡುವುದು ಒಳಿತು. ರಾಜಕಾರಣದಲ್ಲಿ ಸಾವಿರ ಮಾತುಗಳು ಬರುತ್ತವೆ. ಅದು ನಮಗಷ್ಟೇ ಸೀಮಿತವಾಗಬೇಕು. ಕುಟುಂಬದವರ ಬಗ್ಗೆ ಮಾತನಾಡುವುದು ಸರಿಯಲ್ಲ. ನಾವೂ ಕೂಡ ಬೇರೆ ರಾಜಕಾರಣಿಗಳಿಗೆ ನಿಂದಿಸಿದ್ದೇವೆ. ಅವರಿಂದಲೂ ಪ್ರತಿಯಾಗಿ ನಿಂದನೆಗೆ ಒಳಗಾಗಿದ್ದೇನೆ. ಆದರೆ, ಅದರಲ್ಲಿ ಒಂದು ಅರ್ಥವಿರುತ್ತದೆ. ಅದು ಬಿಟ್ಟು ಕುಟುಂಬದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರವೀಂದ್ರ ಶ್ರೀಕಂಠಯ್ಯ ಅವರ ಕುಟುಂಬದ ಕುರಿತು ಕೀಳಾಗಿ ಮಾತನಾಡಲು ಅವರೇನು ಲೈವ್‌ಬ್ಯಾಂಡ್, ಕ್ಯಾಬರೆ ಅಥವಾ ಏನಾದರೂ ದಂಧೆ ನಡೆಸುತ್ತಿದ್ದಾರೆಯೇ?. ಅವರ ಬಗ್ಗೆ ಶಾಸಕ ಉದಯ್ ಏನು ನೋಡಿದ್ದೀರಿ?. ನಿಮ್ಮ ಹೇಳಿಕೆಯನ್ನು ನೋಡಿದ ಮೇಲೂ ನಿಮ್ಮ ಪತ್ನಿ ನಿಮ್ಮನ್ನು ಇನ್ನೂ ಮನೆಯಲ್ಲಿ ಇರಿಸಿಕೊಂಡಿದ್ದಾರೆಯೇ?. ಅಷ್ಟೊಂದು ಗಂಡಸ್ತನವಿದ್ದರೆ ಮನೆಗಲ್ಲ, ಮನೆಯ ರಸ್ತೆಗೆ ಬನ್ನಿ ನೋಡೋಣ ಎಂದು ಸವಾಲು ಹಾಕಿದ ಸುರೇಶ್‌ಗೌಡ, ಮದ್ದೂರು ಕ್ಷೇತ್ರದ ಹೋಟೆಲ್‌ಗಳಲ್ಲಿ ಯಾವ ದಂಧೆ ನಡೆಯುತ್ತಿದೆ ಎಂಬುದು ನಿಮ್ಮ ಅರಿವಿಗಿಲ್ಲವೇ?. ಕೂಡಲೇ ರವೀಂದ್ರ ಶ್ರೀಕಂಠಯ್ಯ ಕುಟುಂಬದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.