

ಮಂಡ್ಯ: ಅಧಿವೇಶನದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಒಟ್ಟಾಗಿ ಸೇರಿ ಮಾತನಾಡಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರ ಪ್ರಮುಖವಾಗಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ನರೇಂದ್ರಸ್ವಾಮಿ ಅವರನ್ನು ಜೆಡಿಎಸ್‌ನ ನಾಯಕರು ಕಟು ಮಾತಿನಲ್ಲಿಯೇ ಟೀಕೆ ಮಾಡಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಮತ್ತು ಸುರೇಶ್‌ಗೌಡ, ಸಿಆರ್‌ಎಸ್ ಹಾಗೂ ಪಿಎಂಎನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಿಲ್ಲೆಯ ಜನರು ನಂಬಿಕೆಯಿಟ್ಟು ಗೆಲ್ಲಿಸಿದರೂ ಅಭಿವೃದ್ಧಿಗೆ ಅನುದಾನ ತರಲಾಗದ ಅಸಮರ್ಥರು. ಮತದಾರರ ಋಣ ತೀರಿಸುವ ಯೋಗ್ಯತೆ ಹಾಗೂ ತಾಕತ್ತು ಇಲ್ಲವೆಂದು ಟೀಕಿಸಿದರು.
ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ತಮ್ಮ ಸರ್ಕಾರದ ಮೊದಲ ಬಜೆಟ್‌ನಲ್ಲಿ ಜಿಲ್ಲೆಗೆ ಕಾಂಗ್ರೆಸ್ ಶಾಸಕರು ಒಂದು ನಯಾಪೈಸೆ ಬಿಡುಗಡೆ ಮಾಡಿಸಿಲಿಲ್ಲ. ಶಾಸಕರು ಆ ಪಕ್ಷದ ಕೈಗೊಂಬೆಯಾಗಿದ್ದು, ಮತ ಹಾಕಿದ ಜನರಿಗೆ ಮೋಸವೆಸಗಿ ತಮ್ಮ ನಾಯಕರನ್ನು ನಂಬಿಸಲು ನಾಟಕವಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಮೇಲೆ ಬಹಳ ನಂಬಿಕೆಯಿಟ್ಟು ರೈತ ಸಂಘದ ಅಭ್ಯರ್ಥಿ ಸೇರಿ ಜಿಲ್ಲೆಯಿಂದ 6 ಶಾಸಕರನ್ನು ಜನರು ಗೆಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಹಳ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ, ಆ ನಂಬಿಕೆಯೆಲ್ಲ ಹುಸಿಯಾಗಿದೆ ಎಂದರು.
ಶಾಸಕನಾಗಿ ಮೂಲೆಯಲ್ಲಿ ಕುಳಿತಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ನಾನೇ ಎಂದೇಳುವ ಚಲುವರಾಯಸ್ವಾಮಿ ಅವರನ್ನು ತೃತೀಯ ದರ್ಜೆ ಗುತ್ತಿಗೆದಾರನಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಉಪಾಧ್ಯಕ್ಷ, ಶಾಸಕ, ಸಂಸದ ಹಾಗೂ ಸಚಿವರನ್ನಾಗಿ ಮಾಡಿದ್ದು ಯಾರು ಎನ್ನುವುದು ನೆನಪಿಲ್ಲವೇ?. ಒಂದು ಪಕ್ಷದ ನಾಯಕರು ನಿಮ್ಮನ್ನು ಶಾಸಕನ್ನಾಗಿ ಮಾಡುವುದೇ ಅವರನ್ನು ಸಿಎಂ ಮಾಡುವುದಕ್ಕಾಗಿ ಅಲ್ಲವೇ?. ಎಚ್‌ಡಿಕೆ ನಿಮ್ಮನ್ನು ಇಡೀ ರಾಜ್ಯದ ನಾಯಕನನ್ನಾಗಿ ಮಾಡಿದ್ದಾರೆ. ಅವರಿಲ್ಲದಿದ್ದರೆ ನೀವು ಏನೂ ಆಗುತ್ತಿರಲಿಲ್ಲ. ಅವರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಯೋಗ್ಯತೆ ಏನೆಂದು ಅರ್ಥ ಮಾಡಿಕೊಳ್ಳಿ. ಅವರು ಸಿಎಂ ಆಗಿದ್ದರಿಂದಲೇ ನಿಮ್ಮನ್ನು 2ನೇ ಸ್ಥಾನದ ನಾಯಕರನ್ನಾಗಿ ಬೆಳೆಸಿದ್ದಾರೆ. ಇದು ನಿಮಗೆ ಅರಿವಿಲ್ಲವೇ?. ಎಚ್‌ಡಿಕೆ ಇಲ್ಲದಿದ್ದರೆ ನೀವು ಹೇಗೆ ಸಚಿವರಾಗುತ್ತಿದ್ದಿರಿ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರಸ್ವಾಮಿ ನಿಷ್ಠರೇ?: ಎಚ್‌ಡಿಕೆ ಅವರ ಬಗ್ಗೆ ಮಾತನಾಡುವಾಗ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ವಲ್ಪ ವಿವೇಕ ಇಟ್ಟುಕೊಂಡು ಮಾತನಾಡಲಿ. ನೀವು ಕಾಂಗ್ರೆಸ್ ಪಕ್ಷದ ನಿಷ್ಠರಾಗಿದ್ದೀರಾ?. ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿರಲಿಲ್ಲವೇ?. ಕುಮಾರಸ್ವಾಮಿ ಅವರೇನು ಅಧಿಕಾರಕ್ಕಾಗಿ ನಿಮ್ಮ ಪಕ್ಷದವರ ಮನೆ ಬಾಗಿಲಿಗೆ ಬಂದಿರಲಿಲ್ಲ. ನಿಮ್ಮವರೇ ಅವರ ಮನೆ ಬಾಗಿಲಿಗೆ ಹೋಗಿ ಸಿಎಂ ಮಾಡಿದ್ದು, ಆದ್ದರಿಂದ ಸಭ್ಯರಾಗಿ ನಡೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ ಅವರು, ಇಡೀ ಜಿಲ್ಲೆಯ ಜನ ಕಾಂಗ್ರೆಸ್‌ಗೆ ಏಕೆ ಮತ ಹಾಕಿ ತಪ್ಪು ಮಾಡಿದ್ದೋ ಎಂದು ಈಗಾಗಲೇ ಹೇಳುತ್ತಿದ್ದಾರೆ. ನಾವು ತಾಳ್ಮೆಯಿಂದ ಕಾಯುತ್ತೇವೆ. ನಮ್ಮ ನಾಯಕರ ಬಗ್ಗೆ ಇದೇ ರೀತಿ ಟೀಕೆ ಮುಂದುವರಿಸಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಿಂದ ಘಟಾನುಘಟಿ ನಾಯಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಅವರಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ಯಾವೊಂದು ನಿರೀಕ್ಷೆಗಳು ನಿಜವಾಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಟ್ರಾಮಾ ಕೇರ್ ಸೆಂಟರ್ ಸಹ ಮೈಸೂರು ಜಿಲ್ಲೆಗೆ ಹಸ್ತಾಂತರವಾಗಿದ್ದು, ಈ ಬಗ್ಗೆ ಮೌನ ತಾಳಿರುವ ಕಾಂಗ್ರೆಸ್ ಶಾಸಕರಿಗೆ ನಾಚಿಕೆಯಾಗುವುದಿಲ್ಲವೇ?. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮಂಡ್ಯದಿಂದ ಬದಲಾವಣೆ ಮಾಡಿ ತಮ್ಮ ಕ್ಷೇತ್ರಕ್ಕೆ ಹಾಕಿಕೊಂಡರೂ ಪ್ರಶ್ನಿಸುವುದನ್ನು ಬಿಟ್ಟು ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದು ಜಿಲ್ಲೆಗೆ ಮಾಡಿದ ದ್ರೋಹ ಎಂದು ಟೀಕಿಸಿದರು.
ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಇದ್ದರು.