ರೈತರು ನೀರು ಕದ್ದು ಮಾರಾಟ ಮಾಡಲ್ಲ: ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು ಆಕ್ರೋಶ

B.R.Ramchandra mandya
Published on

ಮಂಡ್ಯ: ನಾಲೆಯಲ್ಲಿ ಹರಿಯುವ ನೀರನ್ನು ಕದ್ದು ರೈತರು ಖಾಸಗಿಯಾಗಿ ಮಾರಿಕೊಳ್ಳುವುದಿಲ್ಲ ಎನ್ನುವುದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಳಿದುಕೊಳ್ಳಬೇಕು. ನೀರು ಬಳಸಿಕೊಂಡರೆ ಜೈಲು ಶಿಕ್ಷೆ ವಿಧಿಸುವುದಾಗಿ ಕರ್ನಾಟಕ ನೀರಾವರಿ(ತಿದ್ದುಪಡಿ) ವಿಧೇಯಕ-2024 ಮಂಡಿಸಿರುವುದು ಹಾಸ್ಯಾಸ್ಪದ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವುದಾಗಿ ರೈತರು ನೀರು ಕೇಳುತ್ತಾರೆಯೇ ಹೊರತು ಮಾರಾಟ ಮಾಡುವುದಿಲ್ಲ. ಹೀಗಿರುವಾಗ ದಂಡ ವಿಧಿಸುವುದು ಹಾಗೂ ಜೈಲಿಗೆ ಹಾಕುತ್ತೇವೆ ಎನ್ನುವುದು ಎಷ್ಟು ಸರಿ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅನ್ನದಾತರ ವಿರುದ್ಧವೇ ನಡೆದುಕೊಳ್ಳುತ್ತಿದೆ ಎಂದರು.
ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಲು ರೈತರು ಒಂದು ವರ್ಷ ಬೆಳೆ ಹಾಕದಂತೆ ಮಾಡಿದ್ದಾಗಿದೆ. ಈಗ ಜೈಲಿಗೆ ಹಾಕಲು ಮುಂದಾಗಿದೆ. ಇಂತಹ ವಿಧೇಯಕಕ್ಕೆ ತೀವ್ರ ವಿರೋಧವಿದೆ. ಇದನ್ನು ರಾಜ್ಯಸರ್ಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಪ್ರತಿಭಟನೆ ಮಾಡಲಾಗುವುದು. ಹಿಂದೆ ಅಕ್ರಮ ಸಕ್ರಮ ಯೋಜನೆಯಡಿ ಪಂಪ್‌ಸೆಟ್‌ಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಿತ್ತು. ಆದರೀಗ ಮೂರು ಲಕ್ಷ ರೂ ಬೇಕು. ಇನ್ನು ಬೋರ್‌ವೆಲ್ ಕೊರೆಸಲು ಮೂರು ಲಕ್ಷ ರೂ ಬೇಕು. ಇದಕ್ಕಾಗಿ ರೈತರು ಸಾಲ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಎಂ.ಎಸ್.ರಘುನಂದನ್

ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ, ರೈತರನ್ನು ಕಳ್ಳರಂತೆ ನೋಡಿರುವ ಕಾಂಗ್ರೆಸ್ ಸರ್ಕಾರ ನೀರಾವರಿ ತಿದ್ದುಪಡಿ ಕಾಯ್ದೆ-2024 ಅನ್ನು ಜಾರಿಗೆ ತರಲು ಹೊರಟಿರುವುದನ್ನು ತಕ್ಷಣ ವಾಪಸ್ ಪಡೆಯದಿದ್ದರೆ ಹೋರಾಟಕ್ಕೆ ಕರೆ ನೀಡಲಾಗುವುದು. ಈ ವಿಧೇಯಕ ರೈತರಿಗೆ ಮಾರಕವಾಗಿದೆ ಎನ್ನುವ ಸಾಮಾನ್ಯ ಜ್ಞಾನವಿಲ್ಲದ ರಾಜಕಾರಣಿ ಡಿ.ಕೆ.ಶಿವಕುಮಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೆಳೆ ಬೆಳೆಯಲು ನೀರನ್ನು ಉಪಯೋಗಿಸಿದರೆ ಕಳ್ಳ ಎಂದು ದಂಡ ಹಾಕುವುದು, 2 ವರ್ಷ ಜೈಲು ಶಿಕ್ಷೆ ವಿದಿಸುವುದು ದುರಂತ. ನಾಲೆಗಳ ಆಧುನೀಕರಣಕ್ಕೆ 700 ರಿಂದ 800 ಕೋಟಿ ರೂ ಖರ್ಚು ಮಾಡಿದ್ದೀರಿ. ಆದರೆ, ಆಧುನೀಕರಣ ಮಾತ್ರ ಆಗಿಲ್ಲ. ಕೊಳವೆ ಬಾವಿಗಳ ನೋಂದಣಿ ಕಡ್ಡಾಯ ಎಂದು ಹೇಳುತ್ತೀರಿ. ರೈತರ ಜಮೀನಿಗೆ ಸರಿಯಾದ ರೀತಿಯಲ್ಲಿ ನೀರು ತಲುಪಿಸಿ. ರೈತರು ನೀರನ್ನು ಕದಿಯುವುದಿಲ್ಲ. ವ್ಯವಸ್ಥಿತ ಸೌಲಭ್ಯವನ್ನು ಒದಗಿಸುವುದು ನಿಮ್ಮ ಕರ್ತವ್ಯ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net