

ಮಂಡ್ಯ: ಚನ್ನಪಟ್ಟಣ ಉಪಚುನಾವಣೆ ಮತಯಾಚನೆ ವೇಳೆ ಸಚಿವ ಜಮೀರ್ ಅಹಮದ್ ಖಾನ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕರಿಯ ಎಂದು ಟೀಕಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾತ್ರವಲ್ಲದೆ ಜೆಡಿಎಸ್ ಮತ್ತು ಒಕ್ಕಲಿಗ ಸಂಘ ಜಮೀರ್ ವಿರುದ್ಧ ಮುಗಿಬಿದ್ದಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮಾಜಿ ಶಾಸಕ ಸುರೇಶ್‌ಗೌಡ, ಎಚ್‌ಡಿಕೆ ವಿರುದ್ಧ ವರ್ಣಭೇದ ನೀತಿ ತೋರುವ ರೀತಿ ಹೇಳಿಕೆ ಕೊಟ್ಟಿದ್ದಾರೆ. ಜಮೀರ್ ತಮ್ಮ ಮಿತಿ ಅರಿತು ಮಾತನಾಡಬೇಕು. ಇದೀಗ ಹೇಳಿಕೆ ಸಮರ್ಥಿಸಿಕೊಳ್ಳಲು ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ನಾವು ಹಿಂದುಗಳು ಪೂಜೆ ಮಾಡುವ ದೇವರ ಬಣ್ಣಗಳು ಸಹ ಕಪ್ಪಿದೆ. ಆದರೆ ರಾಜಕಾರಣ ಮಾಡಲು ಜನಾಂಗೀಯ ಘರ್ಷಣೆಗೆ ಕಾರಣವಾಗುವ ಹೇಳಿಕೆ ನೀಡಬಾರದು. ಮಾತನ್ನು ಆಡುವಾಗ ಸ್ಥಿಮಿತವಾಗಿರಬೇಕು ಎಂದು ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಜಮೀರ್ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಬೇಕು. ಒಂದು ವರ್ಗದ ಜನರನ್ನು ಓಲೈಸಿಕೊಂಡು ದೇವೇಗೌಡರ ಕುಟುಂಬವನ್ನ ಕೊಂಡುಕೊಳ್ಳುತ್ತೇನೆ ಎನ್ನುವ ಮಾತನ್ನಾಡಿದ್ದು, ಇದೇ ಮಾತನ್ನು ಅವರ ವಿರುದ್ಧ ಬಳಸಿ ನಾವೇ ಅವರನ್ನ ಕೊಂಡುಕೊಳ್ಳುತ್ತೇವೆ ಎಂದರೆ ಸರಿಯಾಗುವುದೇ ಎಂದ ಸುರೇಶ್‌ಗೌಡ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈಟ್ ರೈಟ್ ಎನ್ನುತ್ತಿದ್ದವರನ್ನು ಇಲ್ಲಿವರೆಗೆ ಕರೆ ತಂದಿದ್ದು ದೇವೇಗೌಡರು. ಅದನ್ನು ತಿಳಿದು ಮಾತನಾಡುವುದನ್ನು ಕಲಿಯಬೇಕು ಎಂದು ವಾಗ್ದಾಳಿ ನಡೆಸಿದರು.
ಮೈಸೂರಲ್ಲಿ ಸಚಿವ ಚಲುವರಾಯಸ್ವಾಮಿ ಮೇಲೆ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಮುತ್ತು ಕೊಟ್ಟೆ ಅವರು ನಾಲ್ಕು ಮುತ್ತು ಕೊಟ್ಟರು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಸಚಿವರಿಗೆ ರಕ್ಷಣೆ ಇಲ್ಲ. ಇದು ಅಸಹನೀಯ ಸರ್ಕಾರ. ಈ ಸಂಬಂಧ ಏಕೆ ಕ್ರಮ ಕೈಗೊಳ್ಳಿಲ್ಲ ಎಂಬುದನ್ನು ಬಹಿರಂಗವಾಗಿ ತಿಳಿಸಬೇಕೆಂದು ಆಗ್ರಹಿಸಿದರು.
ಒಮ್ಮೆಯೂ ಕುಳ್ಳ ಎಂದು ಕರೆದಿಲ್ಲ: ಜೆಡಿಎಸ್ ಮಾಜಿ ಶಾಸಕ ಡಾ.ಅನ್ನದಾನಿ ಮಾತನಾಡಿ, ದೇವರಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ ಕುಮಾರಸ್ವಾಮಿ ಒಂದು ದಿನವೂ ಜಮೀರ್ ಅವರನ್ನ ಕುಳ್ಳ ಎಂದು ಕರೆದಿಲ್ಲ. ಅವರಿಬ್ಬರು ಆತ್ಮೀಯವಾಗಿದ್ದರೂ ವೈಯಕ್ತಿಕವಾಗಿ ನಿಂದಿಸುವ ಪದ ಬಳಕೆಯನ್ನು ಎಚ್‌ಡಿಕೆ ಮಾಡಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು.
ಜಮೀರ್ ಕೇಂದ್ರ ಸಚಿವರನ್ನ ಅಪಮಾನ ಮಾಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಜಮೀರ್‌ಗೆ ಕನಿಷ್ಟ ಮಾತನಾಡುವುದು ಸೌಜನ್ಯ ಗೊತ್ತಿಲ್ಲ. ಚಾಮರಾಜಪೇಟೆಯಲ್ಲಿ ಗೆಲ್ಲುವಂತೆ ಮಾಡಿದ ದೇವೇಗೌಡರು, ಜಮೀರ್‌ಗೆ ರಾಜಕೀಯ ಬದುಕು ಕಟ್ಟಿಕೊಟ್ಟರು. ದೇವೇಗೌಡರು ಹಾಗು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಕಾದರೆ ನಾಲಗೆ ಮೇಲೆ ಹಿಡಿತ ಇರಲಿ. ಕಾಂಗ್ರೆಸ್ ಸಚಿವರ ಉದ್ಧಟತನಕ್ಕೆ ಚನ್ನಪಟ್ಟಣದ ಜನತೆ ತಕ್ಕ ಉತ್ತರ ಕೊಡುತ್ತಾರೆ. ನಿಖಿಲ್ ಗೆಲ್ಲಿಸಲು ಜನರ ಬೆಂಬಲ ಇದೆ ಎಂದರು.