

ಚಿಕ್ಕಮಗಳೂರು: ದೇಶದಾದ್ಯಂತ ಹೋರಾಟ ನಡೆಸುತ್ತಿರುವ ರೈತರು, ಕೃಷಿ ಕಾರ್ಮಿಕರು, ದಲಿತ ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳ ಹೋರಾಟವನ್ನು ಉಗ್ರರ ನಂಟು ಕಟ್ಟಿ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಖಂಡಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಬೆಂಬಲವಾಗಿ ನಿಂತ ಸಂಘಟನೆಗಳ ಮುಖಂಡರನ್ನು ಈ ರೀತಿ ಹೋಲಿಕೆ ಮಾಡುವ ಮೂಲಕ ಸಂಸದರು ಅತ್ಯಂತ ಬೇಜವಾಬ್ದಾರಿ ತೋರಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿಯ ಬಹುಪಾಲು ಯೋಜನೆ ಜನವಿರೋಧಿ
ದೇಶ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಹುಪಾಲು ಯೋಜನೆಗಳು ಜನವಿರೋಧಿಯಾಗಿ ಕಾರ್ಪೋರೇಟ್ ವಲಯದ ಬಂಡವಾಳಶಾಹಿಗಳ ಪರವಾದ ನಿಲುವು ಹೊಂದಿವೆ. ದೇಶದಲ್ಲಿ ನಿತ್ಯ ಒಂದಲ್ಲ ಒಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳವಳಿ ನಡೆಸುವುದು ಪ್ರತಿಯೊಬ್ಬರ ಸಂವಿಧಾನ ಬದ್ಧ ಹಕ್ಕು. ಯಾವುದೇ ಪ್ರತಿಭಟನೆಗಳನ್ನು ಅವಮಾನಿಸಿ ಕಡೆಗಣಿಸುವುದು ಸಂವಿಧಾನ ಬಾಹಿರ ಎಂದಿದ್ದಾರೆ.
ಬಹಿರಂಗ ಕ್ಷಮೆ ಯಾಚಿಸಲಿ
ಸದಾ ಒಂದಿಲ್ಲೊಂದು ವಿವಾದದ ಹೇಳಿಕೆ ನೀಡಿ ಅಶಾಂತಿ ಸೃಷ್ಟಿಸುವ ಶೋಭಾ ಕರಂದ್ಲಾಜೆ ರೈತರ ಹೋರಾಟಕ್ಕೆ ಉಗ್ರರ ಷಡ್ಯಂತ್ರವೆಂದಿರುವುದು ಸರಿಯಲ್ಲ. ದೆಹಲಿಯಲ್ಲಿ ರೈತರು ಬೃಹತ್ ಸಂಖ್ಯೆಯಲ್ಲಿ ಹೋರಾಟ ನಡೆಸುತ್ತಿದ್ದು ಇದನ್ನು ಬೆಂಬಲಿಸಿ ಕೇಂದ್ರ ಸಚಿವರೊಬ್ಬರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ.
ಅಮೇರಿಕ, ಬ್ರಿಟನ್ ಮುಂತಾದ ದೇಶಗಳ ಸಂಸದರು ದೇಶದ ರೈತರ ಹೋರಾಟಕ್ಕೆ ಬೆಂಬಲ ನೀಡುತಿದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗಿದೆ. ಈ ಬಗ್ಗೆ ಯೋಚನೆ ಮಾಡದೆ ರೈತರ ಹೋರಾಟವನ್ನು ಟೀಕಿಸಿರುವ ಶೋಭಾ ಕರಂದ್ಲಾಜೆ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಅವರು ಹೋದಲ್ಲೆಲ್ಲ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.