

ಕೊಪ್ಪಳ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಆಗ್ರಹಿಸಿದರು.
ಕುಮಾರಸ್ವಾಮಿ ಅವರು ರಾಜ್ಯ ಕಂಡ ಅಪರೂಪದ ಸಿಎಂ. ಸದ್ಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ ವಿರುದ್ಧ ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಕಳಂಕಿತ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಅಧಿಕಾರಿ ಕುಮಾರಸ್ವಾಮಿ ಅವರನ್ನು ಹಂದಿಗೆ ಹೋಲಿಕೆ ಮಾಡಿ ನಿಂದಿಸಿದ್ದಾರೆ. ಬೇಕೆಂದೇ ಪತ್ರವನ್ನು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಹ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಎಲ್ಲರಿಗೂ ಗೌರವ ಇರುತ್ತದೆ. ಅಧಿಕಾರಿಗಳು ಕಾನೂನು ರೀತಿ ವರ್ತಿಸಲಿ. ಚಂದ್ರಶೇಖರ ತಮ್ಮ ವಿರುದ್ಧದ ಆರೋಪಕ್ಕೆ ಕಾನೂನಾತ್ಮಕ ಉತ್ತರ ನೀಡಲಿ. ಅದು ಬಿಟ್ಟು ದುರ್ವರ್ತನೆ ತೋರುವುದು ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿಎಂ ಸಹ ಇಂಥವರಿಗೆ ಸಹಕಾರ ನೀಡಬಾರದು. ಬದಲಿಗೆ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪ ಏನೇ ಇದ್ದರೂ ಕಾನೂನಾತ್ಮಕ ನಡೆ ಅನುಸರಿಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ಜೆಡಿಎಸ್ನಿಂದ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷರಾದ ಬಸವರಾಜ ಗುಳಗುಳಿ, ಕೆಂಚಪ್ಪ ಹಳ್ಳಿ, ಶ್ರೀನಿವಾಸ ಪೂಜಾರ, ಯಮನಪ್ಪ ಇದ್ದರು.