ನನ್ನ ಸೋಲಿಗೆ ಯಾರನ್ನು ಹೊಣೆ ಮಾಡಲ್ಲ: ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಹೇಳಿಕೆ

B.R.Ramachandru)
Published on

ಮಂಡ್ಯ: ನನ್ನ ಸೋಲಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ, ಚುನಾವಣೆ ವೇಳೆ ಸಣ್ಣ ಪುಟ್ಟ ಲೋಪಗಳಾಗುವುದು ಸಹಜ. ಅನುಭವದ ಕೊರತೆಯೂ ನನ್ನ ಸೋಲಿಗೆ ಕಾರಣವಿರಬಹುದು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಆರ್.ರಾಮಚಂದ್ರು ತಿಳಿಸಿದರು.

ಕಡೇ ಕ್ಷಣದಲ್ಲಿ ದೊರೆತ ಅವಕಾಶ ಸದ್ಬಳಕೆಗೆ ಮುಂದಾದ ನನ್ನನ್ನು ಮನೆಯ ಮಗನೆಂದು ಪ್ರೀತಿಸಿ 50 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ ಕ್ಷೇತ್ರದ ಮತದಾರರಿಗೆ ಋಣಿಯಾಗಿ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತೇನೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ನನ್ನ ಪರವಾಗಿ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಸಾಮಾನ್ಯ ರೈತನ ಮಗನಾದ ನನಗೆ ಸ್ಪರ್ಧೆಗೆ ಅನುವು ಮಾಡಿಕೊಟ್ಟ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಾರಿಯಾಗಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅತ್ಯಲ್ಪ ಅವಧಿಯಲ್ಲಿ ಕ್ಷೇತ್ರದ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗಿಲ್ಲ. ಆದರೂ ನನಗೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಕ್ಷೇತ್ರದ ಮತದಾರ ಬಂಧುಗಳೊಂದಿಗೆ ಮುಂದಿನ ದಿನಗಳಲ್ಲೂ ನಿಕಟ ಸಂಪರ್ಕ ಹೊಂದಿ ಅವರ ಸುಖ-ದುಃಖದಲ್ಲಿ ಭಾಗಿಯಾಗಲು ನನ್ನ ಕುಟುಂಬ ಸದಸ್ಯರು ಹಾಗೂ ನಾನೂ ಮುಂದಾಗುತ್ತೇವೆ. ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಶ್ರಮಿಸುತ್ತೇನೆ, ನನ್ನ ಕೈಲಾದ ಸಾಮಾಜಿಕ ಸೇವೆಯನ್ನೂ ಮುಂದಿನ ದಿನಗಳಲ್ಲೂ ಮುಂದುವರೆಸುತ್ತೇನೆ. ಪಕ್ಷದ ಬಂಡಾಯಗಾರರ ಮನವೊಲಿಕೆ ವಿಚಾರವಾಗಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿತ್ತು ಎಂದು ವಿವರಿಸಿದರು.

ಇನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಸೋಲು ಆಘಾತ ತಂದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಹಿನ್ನೆಲೆಯಲ್ಲಿ ಶಾಸಕರಾಗಿದ್ದ ಪುಟ್ಟರಾಜು ಅವರ ಏತ ನೀರಾವರಿ ಯೋಜನೆಗಳು, ರಸ್ತೆ ಹಾಗೂ ದೇವಾಲಯ ನಿರ್ಮಾಣ ಮುಂತಾದ ಜನೋಪಯೋಗಿ ಸೇವೆಗಳಿಗೂ ಮತದಾರರು ಮಾನ್ಯತೆ ನೀಡದಿರುವುದು ಬೇಸರದ ಸಂಗತಿ ಎಂದರು.

ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ಮುಖಂಡರಾದ ಸ್ವಾಮಿ, ಜಯರಾಂ, ಮೋಹನ್, ಪ್ರತಾಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net