

ರಾಯಚೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವಿಗೆ ಶ್ರಮಿಸಲಾಗುವುದು. ಬಿಜೆಪಿ ಯಾರಿಗೆ ಟಿಕೆಟ್ ಕೊಡುತ್ತದೆ ನನಗೆ ಗೊತ್ತಿಲ್ಲ. ಆದರೆ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಿದರೆ ಗೆಲ್ಲುತ್ತಾರೆ ಎಂದು ದೇವದುರ್ಗ ಶಾಸಕಿ ಕರೆಮ್ಮ ನಾಯಕ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ನಾನು ಬೇಸರ ವ್ಯಕ್ತಪಡಿಸಿಲ್ಲ. ನನ್ನ ಕ್ಷೇತ್ರದಲ್ಲಿನ ವಿಚಾರಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ಮೈತ್ರಿ ಬಗ್ಗೆ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದರು.
ನನಗೆ ಪಕ್ಷ ಎಷ್ಟು ಮುಖ್ಯವೋ ಕ್ಷೇತ್ರದ ಮತದಾರರು ಕುಡಾ ಅಷ್ಟೇ ಮುಖ್ಯವಾಗಿದ್ದಾರೆ. ಪಕ್ಷದ ಕಾರ್ಯಕರ್ತರ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಸೆಣಸಾಡಿ ಗೆಲುವು ಸಾಸಿದ್ದೇನೆ. ಕ್ಷೇತ್ರದ ಮತದಾರರು ಜೆಡಿಎಸ್‌ಗೆ ಮನ್ನಣೆ ನೀಡಿದ್ದಾರೆ.
ಪಕ್ಷದ ವರಿಷ್ಠರು ಬಿಜೆಪಿ ಜತೆ ಮೈತ್ರಿ ವಿಚಾರವಾಗಿ ನಮಗೆ ಇನ್ನೂ ಯಾವುದೆ ರೀತಿಯ ಸೂಚನೆಗಳನ್ನು ನೀಡಿಲ್ಲ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದು ಕರೆಮ್ಮ ನಾಯಕ ಹೇಳಿದರು.