

ಮಂಡ್ಯ: ಜಿಲ್ಲೆಯಲ್ಲಿ ಸಹಕಾರ ಸಂಘದ ಸದಸ್ಯರನ್ನು ದುರುದ್ದೇಶದಿಂದ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿ ನಗರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಎರಡು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು, ಕಾಂಗ್ರೆಸ್ ನಾಯಕರ ಮಾತು ಕೇಳಿ ಅಧಿಕಾರಿಗಳು ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸದಸ್ಯರನ್ನು ಅನರ್ಹ ಮಾಡುತ್ತಿದ್ದಾರೆ. ಈ ಮೂಲಕ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಹಕಾರ ಸಂಘಗಳ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ-ನಿಮ್ಮ ನಡುವೆ ಒಂದು ರೀತಿ ಯುದ್ಧ ಪ್ರಾರಂಭವಾಗಿದೆ. ಈ ಯುದ್ಧದಲ್ಲಿ ಯಾವ ರೀತಿ ವಿರೋಧಿಗಳ ಕಾಲನ್ನು ಎಳೆಯಬಹುದು, ಒಳಗೊಳಗೆ ಮಣಿಸಬಹುದು ಎಂಬುದು ಗಂಡಸುತನವಲ್ಲ. ನಿಮಗೆ ತಾಕತ್ತಿದ್ದರೆ ನೇರವಾಗಿ ಎದುರಿಸಿ, ಸೋಲುವ ಭಯದಲ್ಲಿ ಅಧಿಕಾರಿಗಳನ್ನು ಏಕೆ ಬಲಿಪಶು ಮಾಡುತ್ತೀರಿ. ಅಧಿಕಾರಿಗಳನ್ನು ಬಳಸಿಕೊಂಡು ಜಿಲ್ಲಾ ಸಹಕಾರ ಸಂಘದ ಸದಸ್ಯರನ್ನು ಅನರ್ಹತೆ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಮೇಲುಗೈ ಸಾಧಿಸಲಾಗದ ಭಯದಿಂದ ಕಾಂಗ್ರೆಸ್ ಪಕ್ಷ ವಿಪಕ್ಷಗಳ ಬೆಂಬಲಿಗರನ್ನು ಹಣಿಯುವ ಪ್ರಯತ್ನ ಮಾಡುತ್ತಿದೆ. ಯುದ್ಧಕ್ಕೆ ಬಂದ ಮೇಲೆ ಯುದ್ಧ ಮಾಡಬೇಕೇ ಹೊರತು, ವಿರೋಧಿಗಳನ್ನು ದಮನ ಮಾಡುವುದಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕಾಂಗ್ರೆಸ್ ಪಕ್ಷ ಪೂಜಿಸಿ, ಆರಾಧಿಸಿದೆ. ಅದರರ್ಥ ವಿರೋಧಿಗಳನ್ನು ಅಧಿಕಾರಿಗಳ ಮೂಲಕ ಸಾಕಾರ ಇದೆ ಎಂದು ನಮ್ಮದು ನಡೆಯುತ್ತದೆ ಎಂದ್ಹೇಳಿ ದಮನ ಮಾಡುವಂತದ್ದಲ್ಲ ಎಂಬುದನ್ನು ಈ ಮೂಲಕ ಜಿಲ್ಲಾ ಮಂತ್ರಿ ಚಲುವರಾಯಸ್ವಾಮಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಸಿಡಿಪಿಒ ಆಗಲೂ ಲಾಯಕ್ಕಿಲ್ಲದ ನಾಗಭೂಷಣ್ ಎಂಬ ಅಧಿಕಾರಿ, ಚಲುವರಾಯಸ್ವಾಮಿ ಅವರಿಗೆ ಬಕೆಟ್ ಹಿಡಿಯುತ್ತಾನೆಂದು ಸರ್ಕಾರ ಆತನನ್ನು ಪಾಂಡವಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕನನ್ನಾಗಿ ನೇಮಕ ಮಾಡಿರುವುದಲ್ಲದೆ, ಮದ್ದೂರು ತಾಲೂಕು ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಅಧಿಕಾರ ನೀಡಲಾಗಿದೆ ಎಂದು ಛೇಡಿಸಿದರು.
ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾಗಿರುವ ನಾಗಭೂಷಣ್, ಮುಂದೆಯೂ ಇದೇರೀತಿ ಕಾನೂನು ವಿರುದ್ಧವಾಗಿ ಕೆಲಸ ಮಾಡಿದರೆ ಮುಂದೆ ಕಸ ಹೊಡೆದುಕೊಂಡು ಬಿದ್ದಿರಬೇಕಾಗುತ್ತದೆ. ಅಧಿಕಾರದಲ್ಲಿ ಮುಂದುವರೆಯಬೇಕಾದರೆ ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ಐಎಎಸ್, ಐಪಿಎಸ್ ಅಧಿಕಾರಿಗಳ ಜತೆ ನಾನೂ ಕೆಲಸ ಮಾಡಿದ್ದೇನೆ. ವಿರೋಧಿಗಳಿಗೂ ನೋವು ಆಗದ ಹಾಗೆ ಕೆಲಸ ಮಾಡಿದ್ದೀವಿ. ಮಂಡ್ಯ ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದ ಡೇರಿ ಸಭೆ ನಡೆಸಲು ಕೋರಂ ಅಭಾವವಿದ್ದರೂ ಸಭೆ ನಡೆಸಲು ಹೋಗಿ, ಒಬ್ಬ ಅಮಾಯಕ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ, ನಿಮಗೆ ನಾಚಿಕೆ ಆಗಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.
ಪಾಂಡವಪುರ ತಾಲ್ಲೂಕು ಕೆ.ಬೆಟ್ಟಹಳ್ಳಿ ಸಹಕಾರ ಸಂಘವು ಇಡೀ ಸಹಕಾರ ಕ್ಷೇತ್ರದಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ. ಗುರುಸ್ವಾಮಿ ಅವರು 40 ರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕರ್ನಾಟಕ ಸರ್ಕಾರ ‘ಸಹಕಾರ ರತ್ನ’ ಪ್ರಶಸಿ ನೀಡಿ ಗೌರವಿಸಿದೆ. ಅಂತಹ ಸೊಸೈಟಿಯನ್ನು ಚುನಾವಣೆ ಮಾಡದೆ ಸಹಕಾರ ಸಂಘವನ್ನು ಅನರ್ಹ ಮಾಡಲಾಗಿದೆ. ನಿಮಗೆ ನಾಚಿಕೆ ಆಗಲ್ಲವೇ?. ಜಿಲ್ಲಾ ಸಹಕಾರ ಸಂಘದ ಸದಸ್ಯರನ್ನು ಅನರ್ಹತೆ ಮಾಡುತ್ತಿರುವ ಬಗ್ಗೆ ಉಗ್ರ ಹೋರಾಟ ಮಾಡಲು ತೀರ್ಮಾನಿಸಿದ್ದೆವು. ಆದರೆ, ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎರಡು ಪಕ್ಷದ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ನೀಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೆ ನಾಳೆಯಿಂದ ಜಿಲ್ಲೆಯಲ್ಲಿ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ಸಣ್ಣಪುಟ್ಣ ನ್ಯೂನತೆಗಳನ್ನು ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ದೊಡ್ಡದು ಮಾಡಿ, ಸದಸ್ಯತ್ವವನ್ನು ರದ್ದುಪಡಿಸುತ್ತಿದೆ. ಎಆರ್ ಹಾಗೂ ಡಿಆರ್ ಎರಡೂ ಅಧಿಕಾರವನ್ನು ನಾಗಭೂಷಣ್ ಅವರೇ ನಿರ್ವಹಿಸುತ್ತಿದ್ದಾರೆ. ಏಕಪಕ್ಷೀಯವಾಗಿ ಧೋರಣೆ ಮಾಡುತ್ತಿದ್ದು, ಅವರನ್ನು ಚುನಾವಣೆ ಮುಗಿಯುವವರೆಗೂ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಲ್ಲಿ ಮನವಿ ಮಾಡಿದ್ದೆವು. ಆದರೆ, ಅದು ಆಗಿಲ್ಲ. 180 ದಿನ ಹಾಲು ಹಾಕದಿದ್ದರೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಬೈಲಾದಲ್ಲಿದೆ. ಇದನ್ನು ಸಹಕಾರ ಸಂಘಗಳ ಅಧಿಕಾರಿಗಳು ಪ್ರತಿ ವರ್ಷನೂ ಪ್ರಶ್ನೆ ಮಾಡಬೇಕು. ಆದರೆ, ಯಾವ ಕೆಲಸನೂ ಮಾಡಿಲ್ಲ. ಈಗ ಸಹಾಯಕ ಉಪನಿಬಂಧಕರು ಯಾವುದೋ ಅರ್ಜಿ ತರಿಸಿಕೊಂಡು, ಅರ್ಜಿ ಮುಖಾಂತರ ಇಂದು ನೋಟಿಸ್ ಕೊಟ್ಟು, ನಾಳೆಗೇ ಅನರ್ಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ನಿರ್ದೇಶಕಿ ರೂಪಾ ಇತರರಿದ್ದರು.