ಕಡೂರು ಪುರಸಭೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ

web 1
Published on

ಕಡೂರು: ನಿರೀಕ್ಷೆಯಂತೆ ಕಡೂರು ಪುರಸಭೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಹಿಡಿಯಲು ಸಫಲವಾಗಿದ್ದು, ಜೆಡಿಎಸ್ ಸದಸ್ಯ ಭಂಡಾರಿ ಶ್ರೀನಿವಾಸ್ ಅಧ್ಯಕ್ಷರಾಗಿ, ವಿಜಯಾ ಚಿನ್ನರಾಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸರಳ ಬಹುಮತ ಇಲ್ಲದಿದ್ದರೂ ಅಧಿಕ ಸ್ಥಾನ ಗಳಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರ ಬೆಂಬಲ ಪಡೆದು ಅಧಿಕಾರ ಹಿಡಿಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಜೆಡಿಎಸ್​ನ ಪುರಸಭೆ ಸದಸ್ಯರು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳಲು ಬಯಸಿದ ಕಾರಣ ಕಾಂಗ್ರೆಸ್ ಲೆಕ್ಕಾಚಾರ ಹುಸಿಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮೈತ್ರಿಕೂಟದಿಂದ ಜೆಡಿಎಸ್ ಸದಸ್ಯ ಭಂಡಾರಿ ಶ್ರೀನಿವಾಸ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ವಿಜಯಾ ಚಿನ್ನರಾಜು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್​ನಿಂದ ಅಧ್ಯಕ್ಷ ಸ್ಥಾನಕ್ಕೆ ಯಾಸಿನ್, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಆನಂದ್ ನಾಮಪತ್ರ ಸಲ್ಲಿಸಿದ್ದರು. ಮೈತ್ರಿಕೂಟದ ಅಭ್ಯರ್ಥಿಗಳಿಗೆ ತಲಾ 14 ಮತಗಳು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ ಏಳು ಮತಗಳು ಲಭಿಸಿದವು. ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು, ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಪಕ್ಷೇತರ ಸದಸ್ಯ ಎಸ್.ಟಿ. ಮೋಹನ್​ಕುಮಾರ್ ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net