ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವೇ?

06_HSN_05
ಅರಸೀಕೆರೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎಚ್.ಡಿ. ದೇವೇಗೌಡರು ಉದ್ಘಾಟಿಸಿದರು. ಎಚ್.ಡಿ. ದೇವೇಗೌಡ, ಸೂರಜ್ ರೇವಣ್ಣ, ಹೆರಗು ವಾಸುದೇವ್ ಇತರರು ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ಕೇವಲ ಮೂರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೇಂದ್ರದಲ್ಲಿ ಸರ್ಕಾರ ರಚಿಸಿ ಅಧಿಕಾರ ಹಿಡಿಯಲು ಸಾಧ್ಯವೇ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.

ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಈವರೆಗೆ ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಕೂಡ ಸಿಕ್ಕಿಲ್ಲ. ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಆರೋಪಿಸಿದರು.

ಇತ್ತೀಚಿಗೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ವಿವಿಧ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿ, 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಜತೆಗೆ ತಮ್ಮ ಸರ್ಕಾರ ಬಂದರೆ ದೇಶದಲ್ಲಿ 8 ಸಾವಿರ ಕೋಟಿ ಮನೆಗಳನ್ನು ನಿರ್ಮಾಣ ಮಾಡಿ, ಎಲ್ಲ ರೀತಿಯ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇವರ ಈ ಎಲ್ಲ ಭರವಸೆಗಳನ್ನು ಈಡೇರಿಸಲು ಹಣ ಎಲ್ಲಿದೆ? ಇಂತಹ ಸುಳ್ಳನ್ನು ಜನ ನಂಬಬಾರದು ಎಂದು ಹೇಳಿದರು.
ಅರಸೀಕೆರೆಯಲ್ಲಿ ಕುಡಿಯುವ ನೀರಿಗಾಗಿ 28 ಬೋರ್‌ವೆಲ್ ತೆಗೆದ ಬಳಿಕ ಅದು ಕುಡಿಯಲು ಯೋಗ್ಯವಲ್ಲದ ನೀರು ಎಂದು ತಿಳಿದಾಗ ಹೇಮಾವತಿಯಿಂದ ನೀರು ಕೊಡಲು ಮುಂದಾದೆ. ಎತ್ತಿನ ಹೊಳೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಮುಂದಾಗಿರುವ ಕಾಂಗ್ರೆಸ್, ಅರಸೀಕೆರೆಗೆ ನೀರು ಹರಿಸಲಾಗುವುದು ಎಂದು ಸುಳ್ಳು ಹೇಳಿದ್ದಾರೆ ಎಂದರು.

ಶುಕ್ರವಾರ ಬಾಬು ಜಗಜೀವನರಾಮ್ ಜಯಂತಿ ನಡೆದಿದೆ. ಆದರೆ ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ಬಾಬು ಜಗಜೀವನರಾಮ್ ಬಗ್ಗೆ ಮಾತನಾಡಿಲ್ಲ. ಇಂದಿರಾ ಗಾಂಧಿ, ನೆಹರು ಕಾಲದಲ್ಲಿ ಸಚಿವರಾಗಿದ್ದವರಿಗೆ ಸಲ್ಲಿಸುವ ಗೌರವ ಇದೇನಾ? ಅಂಬೇಡ್ಕರ್ ಅವರ ಆಶಯದಂತೆ ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದು ಇದೇ ದೇವೇಗೌಡ, ಇದರ ಬಗ್ಗೆ ಜನರು ಯೋಚಿಸಬೇಕು ಎಂದು ತಿಳಿಸಿದರು.

ತೆಂಗಿನ ಮರದ ಕೆಳಗೆ ಮಲಗಿ ಪರಿಹಾರಕ್ಕಾಗಿ ಡ್ರಾಮಾ ಮಾಡಿದ ವ್ಯಕ್ತಿಗಳನ್ನು ನಾನು ನೋಡಿದ್ದೇನೆ ಎಂದು ಶಾಸಕ ಕೆಎಂಶಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಡಾ.ಮಂಜುನಾಥ್ ಸೋಲಿಸಲು ಅದೇ ಹೆಸರಿನ ಹಲವರಿಂದ ನಾಮಪತ್ರ ಸಲ್ಲಿಸಿದ್ದಾರೆ. ಇಂತಹ ವಿಧಾನಗಳಿಂದ ಅವರನ್ನು ಸೋಲಿಸಲು ಸಾಧ್ಯವೇ? ಎಂದರು.ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ದೇವೇಗೌಡರ ಮುಖ ನೋಡಿ ಯಾರೂ ಮತ ಹಾಕಲ್ಲ. ಹಣ ಕೊಟ್ಟರೆ

ಮಾತ್ರ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಹಣದಿಂದ ಅಳೆಯುವ ವ್ಯಕ್ತಿಗಳಿಗೆ ಕ್ಷೇತ್ರದ ಜನ ಬುದ್ಧಿ ಕಲಿಸಬೇಕು. 15 ವರ್ಷ ನಮ್ಮ ಬಳಿ ತಿಂದು ತೇಗಿ ಹೋಗಿರುವ ಗಿರಾಕಿಗೆ ಈ ಬಾರಿಯ ಚುನಾವಣೆಯಲ್ಲೇ ತಕ್ಕ ಉತ್ತರ ನೀಡಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಅರಸೀಕೆರೆ ತಾಲೂಕಿಗೆ ಕುಡಿಯುವ ನೀರು, ಗಂಡಸಿಯಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣ, ರಸ್ತೆ, ಶಿಕ್ಷಣ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಕೆಲಸ ಮಾಡಿದೆ. ಜತೆಗೆ ಕೈಗಾರಿಕೆ ಸ್ಥಾಪಿಸಿ ಸಾವಿರಾರು ಜನರಿಗೆ ಕೆಲಸ ಮಾಡಲು ಅನುಕೂಲ ಕಲ್ಪಿಸುವ ಜೆಡಿಎಸ್ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತಹವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರಲಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿ, ಬಡವರ, ದೀನ- ದಲಿತರ, ನೊಂದವರ ಪರವಾಗಿ ಕೆಲಸ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ದೇವೇಗೌಡರಿಗೆ ಹಾಗೂ ಜೆಡಿಎಸ್‌ಗೆ ಶಕ್ತಿ ತುಂಬುವ ಕೆಲಸವನ್ನು ಈ ಭಾಗದ ಜನ ಮಾಡಿದ್ದಾರೆ. ಕಷ್ಟದ ಕಾಲದಲ್ಲಿ ದೇವೇಗೌಡರ ಕೈ ಹಿಡಿದು ಶಕ್ತಿ ತುಂಬುವ ಕೆಲಸ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣಗೂ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ತಮ್ಮ 91ರ ವಯಸ್ಸಿನಲ್ಲಿ ಕೂಡ ಜಿಲ್ಲೆಯ ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ದೇವೇಗೌಡ ಅವರನ್ನು ತುಮಕೂರಿನಲ್ಲಿ ಸಚಿವರೊಬ್ಬರು ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಇನ್ನು ಕೆಲವರು ಎಲ್ಲವೂ ಸಿದ್ದರಾಮಯ್ಯ ಅವರಿಂದಲೇ ಆಗಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎನ್ನುವ ಮೂಲಕ ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕ ಕೆ.ಎಂ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಪರಿಣಾಮ ಇಂದು ಅರಸೀಕೆರೆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಕೊಬ್ಬರಿ ಖರೀದಿಗೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಮುಖಂಡರಾದ ಹೆರಗು ವಾಸುದೇವ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net