

ಮೈಸೂರು: ನಾಯಕ ಸಮಾಜಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಅನುಕೂಲವಾಗಿದ್ದು, ಮೈಸೂರು-ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಸಮಾಜ ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆ ಎಂದು ಸಮುದಾಯದ ಮುಖಂಡ ಹಾಗೂ ಜಂಗಲ್ ಲಾಡ್ಜ್‌ನ ಮಾಜಿ ಅಧ್ಯಕ್ಷ ಅಪ್ಪಣ್ಣ ಹೇಳಿದರು.
ರಾಜ್ಯದ ತಳವಾರ, ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಅಧಿಕೃತವಾಗಿ ಸೇರಿಸಿದ ಕೀರ್ತಿ ಬಿಜೆಪಿ ಮತ್ತು ಮೋದಿ ಅವರಿಗೆ ಸಲ್ಲುತ್ತದೆ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಅಂದಿನ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್, ಸದಾನಂದಗೌಡ ಹಾಗೂ ಸಂಸದ ಪ್ರತಾಪ್ ಸಿಂಹ ಕೂಡ ನೆರವು ನೀಡಿದ್ದಾರೆ. ಕಳೆದ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ರಾಜಕೀಯವಾಗಿಯೂ ಅನುಕೂಲ ಕಲ್ಪಿಸಲಾಗಿದೆ. ಈ ಎಲ್ಲ ಸಹಾಯವನ್ನು ನಮ್ಮ ಸಮುದಾಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೆನೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೀರ ಮದಕರಿ ನಾಯಕ ನಮ್ಮ ಸಮಾಜದ ಹೆಮ್ಮೆಯ ನಾಯಕ. ಮೈಸೂರು ಭಾಗದಲ್ಲಿ ನಮ್ಮ ಸಮುದಾಯ ಮೈಸೂರು ಮಹಾರಾಜರಿಗೂ ಆಪ್ತ ಅಂಗರಕ್ಷಕರಾಗಿ ಕಾರ್ಯನಿರ್ವಹಿಸಿದೆ. ರಾಮಾಯಣ ಮತ್ತು ಮಹಾಭಾರತ ಬರೆದವರು ನಮ್ಮ ವಾಲ್ಮೀಕಿ ಸಮಾಜದವರೆ ಆಗಿದ್ದಾರೆ. ಈ ಬಾರಿ ಯದುವೀರ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ, ಚಾಮರಾಜನಗರದಲ್ಲಿ ಬಾಲರಾಜ್ ಹಾಗೂ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ನೀಡಲಾಗುತ್ತದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚು ಅವಕಾಶ ನೀಡಿದೆ. ಸಾಮಾನ್ಯ ವರ್ಗಕ್ಕಿದ್ದರೂ ಮೈಸೂರು ಮೇಯರ್ ಸ್ಥಾನವನ್ನು ನಮ್ಮ ಸಮುದಾಯಕ್ಕೆ ನೀಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ನನಗೂ ಮೂರು ಬಾರಿ ಟಿಕೆಟ್ ನೀಡಿದ್ದರು ಎಂದು ತಿಳಿಸಿದರು.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿದರು. ಮಾಜಿ ವಿಧಾನಪರಿಷತ್ ಸದಸ್ಯ ಸಿದ್ದರಾಜು, ಮುಖಂಡರಾದ ರಾಮಚಂದ್ರ, ಜಯಪ್ರಕಾಶ್ ಚಿಕ್ಕಣ್ಣ, ಮುದ್ದುಕೃಷ್ಣ, ಪ್ರಶಾಂತ್, ಚಿಕ್ಕಣ್ಣ ನಾಯಕ, ರಾಮಕೃಷ್ಣ ಇದ್ದರು.